ಕೆನ್‌ಬೆರ್ರಾ: ಶರ್ಮಿಳಾ ದೇವಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಜೂನಿಯರ್ ಮಹಿಳೆಯರು ನ್ಯೂಜಿಲೆಂಡ್ ತಂಡವನ್ನು 4–1ರಿಂದ ಮಣಿಸಿದರು. ಇಲ್ಲಿನ ನಡೆಯುತ್ತಿರುವ ಮೂರು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಶನಿವಾರ ಭಾರತಕ್ಕೆ ನ್ಯೂಜಿಲೆಂಡ್ ಸಾಟಿಯಾಗಲೇ ಇಲ್ಲ.
ಪಂದ್ಯದ ಆರಂಭದಲ್ಲೇ ಕಿವೀಸ್ ತಂಡಕ್ಕೆ ಮುನ್ನಡೆ ಸಿಕ್ಕಿತ್ತು. ಆ ತಂಡದ ಒಲಿವಿಯಾ ಶಾನನ್ ಅವರುನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿಸಿ ಸಂಭ್ರಮಿಸಿದರು. ಆದರೆ 12ನೇ ನಿಮಿಷದಲ್ಲಿ ಮೊದಲ ಯಶಸ್ಸು ಕಂಡ ಶರ್ಮಿಳಾ ದೇವಿ ಪಂದ್ಯ ಸಮಬಲಕ್ಕೆ ತಂದರು. ಆ ಬಳಿಕ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು.
ಎರಡನೇ ಕ್ವಾರ್ಟರ್‌ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು (27ನೇ ನಿಮಿಷ) ಗೋಲಾಗಿ ಪರಿವರ್ತಿಸುವಲ್ಲಿ ಬ್ಯೂಟಿ ಡಂಗ್‌ಡಂಗ್ ತಪ್ಪು ಮಾಡಲಿಲ್ಲ. ಭಾರತಕ್ಕೆ 2–1 ಮುನ್ನಡೆ ದೊರೆಯಿತು. ಆ ಬಳಿಕ ನ್ಯೂಜಿಲೆಂಡ್ ತಂಡ ನಡೆಸಿದ ಎರಡು ಪ್ರಯತ್ನಗಳನ್ನು ಗೋಲ್‌ಕೀಪರ್ ಬಿಚುದೇವಿ ಕರಿಬಮ್ ತಡೆದರು.
43ನೇ ನಿಮಿಷದಲ್ಲಿ ಮತ್ತೊಮ್ಮೆ ಫೀಲ್ಡ್ ಗೋಲು ದಾಖಲಿಸಿದ ಶರ್ಮಿಳಾ ಭಾರತ ತಂಡದಲ್ಲಿ ಸಂತಸದ ನಗೆ ಚಿಮ್ಮಿಸಿದರು. ಆ ನಂತರ ಮತ್ತಷ್ಟು ಆಕ್ರಮಣಕಾರಿಯಾದ ತಂಡಕ್ಕೆ 48ನೇ ಪೆನಾಲ್ಟಿ ಕಾರ್ನರ್ ದೊರೆಯಿತು. ಯುವ ಆಟಗಾರ್ತಿ ಲಾಲ್‌ರಿಂದಿಕಿ ಅವರು ಎದುರಾಳಿ ಗೋಲ್‌ಕೀಪರ್ ಕೆಲ್ಲಿ ಕಾರ್ಲೈನ್ ಅವರನ್ನು ವಂಚಿಸಿ ಭಾರತಕ್ಕೆ ನಾಲ್ಕನೇ ಗೋಲು ಗಳಿಸಿಕೊಡುವಲ್ಲಿ ಯಶಸ್ವಿಯಾದರು.
ಭಾರತ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾನುವಾರ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.