ADVERTISEMENT

ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿ: ಭಾರತಕ್ಕೆ ಡಚ್‌ ತಂಡದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 13:46 IST
Last Updated 11 ಡಿಸೆಂಬರ್ 2023, 13:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕ್ವಾಲಾಲಂಪುರ: ಎರಡು ಬಾರಿಯ ಚಾಂಪಿಯನ್ ಭಾರತ ತಂಡ, ಪುರುಷರ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬಲಿಷ್ಠ ನೆದರ್ಲೆಂಡ್ಸ್‌ ತಂಡವನ್ನು ಮಂಗಳವಾರ ಎದುರಿಸಲಿದ್ದು, ಆಟದ ಮಟ್ಟವನ್ನು ಎತ್ತರಿಸಿಕೊಳ್ಳಬೇಕಾದ ಅಗತ್ಯವಿದೆ.

ಭಾರತ ಈ ಹಿಂದೆ 2001ರಲ್ಲಿ ಆಸ್ಟ್ರೇಲಿಯಾ ಹೋಬಾರ್ಟ್‌ನಲ್ಲಿ ಮತ್ತು 2016ರಲ್ಲಿ ತವರಿನಲ್ಲಿ (ಲಖನೌ) ಈ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. 1997ರಲ್ಲಿ ಇಂಗ್ಲೆಂಡ್‌ನ ಮಿಲ್ಟನ್‌ ಕೀನ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು.

ADVERTISEMENT

‘ಸಿ’ ಗುಂಪಿನ ಪಂದ್ಯಗಳಲ್ಲಿ ಭಾರತ ಮಿಶ್ರಪ್ರದರ್ಶನ ನೀಡಿದೆ. ಕೊರಿಯಾ ಮೇಲೆ 4–1 ರಿಂದ ಗೆದ್ದರೂ, 1–4 ರಿಂದ ಸ್ಪೇನ್ ಎದುರು ಸೋಲನುಭವಿಸಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಕೆನಡಾ ತಂಡವನ್ನು 10–1 ಗೋಲುಗಳಿಂದ ಸದೆಬಡಿದು ಗುಂಪಿನಲ್ಲಿ ಎರಡನೇ ಸ್ಥಾನದೊಡನೆ ಎಂಟರ ಘಟ್ಟ ತಲುಪಿದೆ. ಮೂರೂ ಪಂದ್ಯ ಗೆದ್ದ ಸ್ಪೇನ್ ಮೊದಲ ಸ್ಥಾನ ಗಳಿಸಿತ್ತು.

ನೆದರ್ಲೆಂಡ್ಸ್‌ ಎರಡು ಪಂದ್ಯ ಗೆದ್ದು, ಒಂದನ್ನು ಡ್ರಾ ಮಾಡಿಕೊಂಡು ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತ್ತು.

ಭಾರತ ಸಕಾರಾತ್ಮಕ ಆರಂಭ ಪಡೆದರೂ, ಸ್ಪೇನ್ ಎದುರಿನ ಪಂದ್ಯದಲ್ಲಿ ಅದರ ದೌರ್ಬಲ್ಯ ಕಂಡಿತ್ತು. ಚುರುಕಾದ, ಕಿರು ಪಾಸ್‌ಗಳೊಂದಿಗೆ ಆಡಿದ ಸ್ಪೇನ್‌, ಭಾರತದ ರಕ್ಷಣಾ ಕೋಟೆಯಲ್ಲಿ ಮುನ್ನುಗ್ಗಲು ಸಾಕಷ್ಟು ಬಿರುಕುಗಳನ್ನು ಕಂಡುಕೊಂಡಿತ್ತು. ಹೀಗಾಗಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯ ಭಾರತಕ್ಕೆ ಎಚ್ಚರಿಕೆಯ ಗಂಟೆ. ನೆದರ್ಲೆಂಡ್ಸ್ ಕೂಡ ವ್ಯವಸ್ಥಿತ ಸಂಯೋಜನೆಯಿಂದ ಆಡುವ ತಂಡ. ಒತ್ತಡದ ಸಂದರ್ಭದಲ್ಲಿ ಹೆಚ್ಚು ಪೆನಾಲ್ಟಿ ಕಾರ್ನರ್‌ಗಳನ್ನು ಎದುರಾಳಿಗೆ ಬಿಟ್ಟುಕೊಡದಂತೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.

ಕೆನಡಾ ವಿರುದ್ಧ 10–1 ಗೆಲುವು ನಮಗೆ ವಿಶ್ವಾಸ ವೃದ್ಧಿಸಲು ನೆರವಾಗಲಿದೆ ಎಂಬುದನ್ನು ತಂಡದ ನಾಯಕ ಉತ್ತಮ್ ಸಿಂಗ್ ಅವರೂ ಒಪ್ಪಿಕೊಂಡರು. ‘ಈ ವಿಶ್ವಕಪ್‌ನಲ್ಲಿ ನಾವು ಕೆಲವು ಉತ್ತಮ ಪಂದ್ಯಗಳನ್ನು ಆಡಿದೆವು. ಕೆನಡಾ ವಿರುದ್ಧ ದೊಡ್ಡ ಗೆಲುವು ನಾಕೌಟ್‌ ಹಂತದಲ್ಲಿ ನಮ್ಮ ವಿಶ್ವಾಸ ವೃದ್ಧಿಸಲಿದೆ. ನಮ್ಮಿಂದಾದಷ್ಟು ಒಳ್ಳೆಯ ಆಟ ಆಡುತ್ತೇವೆ’ ಎಂದು ಉತ್ತಮ್ ಹೇಳಿದರು.

ಸೆಮಿಫೈನಲ್ ಪಂದ್ಯಗಳು ಗುರುವಾರ ನಡೆಯಲಿದ್ದು, ಫೈನಲ್ ಶನಿವಾರ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.