ನವದೆಹಲಿ: ಹರಿಯಾಣದ ಉದಯೋನ್ಮುಖ ಶೂಟರ್ ಕನಕ್ ಅವರು, ಜರ್ಮನಿಯ ಝೂಲ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಬುಧವಾರ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
17 ವರ್ಷ ವಯಸ್ಸಿನ ಕನಕ್, ಎಂಟು ಸ್ಪರ್ಧಿಗಳಿದ್ದ, 24 ಶಾಟ್‌ಗಳ ಫೈನಲ್‌ನಲ್ಲಿ 239 ಪಾಯಿಂಟ್ಸ್ ಕಲೆಹಾಕಿದರು. ಎರಡು ಬಾರಿಯ ಒಲಿಂಪಿಯನ್ ಮಾಲ್ಡೋವಾದ ಅನ್ನಾ ಡುಲ್ಸೆ 1.7 ಪಾಯಿಂಟ್ ಅಂತರದಿಂದ ಎರಡನೇ ಸ್ಥಾನಕ್ಕೆ ಸರಿದರು. ಚೀನಾ ತೈಪೆಯ ಚೆನ್ ಯೆನ್–ಚಿಂಗ್ ಕಂಚಿನ ಪದಕ ಪಡೆದರು.
ಲಿಮಾ (ಪೆರು)ದಲ್ಲಿ 2024ರಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸ್ಪರ್ಧಿ ಬೆಳ್ಳಿ ಪದಕ ಗೆದ್ದಿದ್ದರು.
ಇದಕ್ಕೆ ಮೊದಲು ಭಾರತದ ಪ್ರಾಚಿ ಸಹ ಅರ್ಹತಾ ಸುತ್ತಿನ ನಂತರ ಐದನೇ ಸ್ಪರ್ಧಿಯಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಅರ್ಹತಾ ಸುತ್ತಿನಲ್ಲಿ ಕನಕ್ ನಾಲ್ಕನೇ ಸ್ಥಾನ ಗಳಿಸಿದ್ದರು.
ಮಂಗಳವಾರ, ಭಾರತದ ಅಡ್ರಿಯಾನ್ ಕರ್ಮಾಕರ್ ಅವರು 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.