ADVERTISEMENT

ಗುಡ್ಡಗಾಡು ಓಟಗಾರ್ತಿ ಈಗ ಹಾಕಿ ಸಹಾಯಕ ಕೋಚ್: ಸಾಧನೆಯತ್ತ ಮುನ್ನುಗ್ಗಿದ ಅಂಕಿತಾ

ಸುನಿಲ್ ಎಂ.ಎಸ್.
Published 22 ಜುಲೈ 2021, 19:30 IST
Last Updated 22 ಜುಲೈ 2021, 19:30 IST
ಅಂಕಿತಾ ಸುರೇಶ್
ಅಂಕಿತಾ ಸುರೇಶ್   

ಸುಂಟಿಕೊಪ್ಪ: ಕೊಡಗು ಜಿಲ್ಲೆಯು ಹಲವು ಕ್ರೀಡಾ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆ ಸಾಲಿಗೆ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಅಂಕಿತಾ ಸುರೇಶ್ ಅವರು ಸೇರ್ಪಡೆಗೊಂಡಿದ್ದಾರೆ.

ಕೊಡಗು ಎಂದ ಕೂಡಲೇ ನೆನಪಿಗೆ ಬರುವುದು ಹಾಕಿ ಕ್ರೀಡೆ. ಇದೀಗ ಹಾಕಿ ಕ್ರೀಡೆಗೆ ಕೊಡಗಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಹಾಕಿ ಕ್ರೀಡಾಪಟು ಹೊನ್ನಂಪಾಡಿ ಅಂಕಿತಾ ಸುರೇಶ್ ಅವರು ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಹಿರಿಯರ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಕೋಚ್ ಆಗಿ ದೇಶವನ್ನು ಪ್ರತಿನಿಧಿಸುತ್ತಿರುವುದು ಸುಂಟಿಕೊಪ್ಪಕ್ಕೆ ಕಿರೀಟ ಬಂದಂತಾಗಿದೆ. ಅದರಲ್ಲೂ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಕೋಚ್ ಆಗಿರುವುದು ಕೊಡಗು ಜಿಲ್ಲೆ ಮಾತ್ರವಲ್ಲ ರಾಜ್ಯದ ಸಂದ ಗೌರವವಾಗಿದೆ.

ಅಂಕಿತಾ ಅವರು ತಮ್ಮ ಶಾಲಾ ವಿದ್ಯಾಭ್ಯಾಸದ ಹಂತದಲ್ಲಿ ಗುಡ್ಡಗಾಡು ಓಟ, ಇತರೆ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಪಿಯುಸಿ ಹಂತಕ್ಕೆ ಬಂದಾಗ ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ವಸತಿ ನಿಲಯಕ್ಕೆ ಸೇರಿಕೊಂಡ ಅಂಕಿತ ಅವರು ಅಥ್ಲೆಟಿಕ್ ಜತೆಯಲ್ಲಿ ಹಾಕಿಯತ್ತ ತನ್ನ ಗಮನವನ್ನು ಹರಿಸಿದರು.

ADVERTISEMENT

ಸುದೀರ್ಘ ತರಬೇತಿಯ ನಂತರ ಹಾಕಿಯಲ್ಲಿ ಪೂರ್ಣಾವಧಿ ತೊಡಗಿಸಿಕೊಂಡ ಅವರು ನಂತರ ಹಿಂತಿರುಗಿ ನೋಡದೇ ಸಾಧನೆಯತ್ತ ಮುನ್ನುಗ್ಗಿದ್ದಾರೆ.

ಅಂಕಿತಾ ಶಿಕ್ಷಣ: ಪ್ರೌಢ, ಪಿಯುಸಿ,ಪದವಿ ಶಿಕ್ಷಣವನ್ನು ಮಡಿಕೇರಿಯಲ್ಲಿ, ಉನ್ನತ ವಿದ್ಯಾಭ್ಯಾಸವನ್ನು ಮಣಿಪಾಲ್ ಶಿಕ್ಷಣ ಸಂಸ್ಥೆ, ಅಣ್ಣಾಮಲೈ ವಿಶ್ವವಿದ್ಯಾನಿಲಯ, ಬೆಂಗಳೂರು ನೇತಾಜಿ ಸುಭಾಷ್ ದಕ್ಷಿಣ ಕೇಂದ್ರದಲ್ಲಿ ಮುಗಿಸಿ ಅತ್ಯಧಿಕ ಅಂಕಗಳಿಂದ ಉತ್ತೀರ್ಣರಾಗಿದ್ದಾರೆ.

ಸಾಧನೆಗಳು: 2008ರಿಂದ 2010ರವರೆಗೆ ಪಂಜಾಬ್, ಕೇರಳ, ಮೈಸೂರು, ಬೆಂಗಳೂರು, ಮಂಗಳೂರುಗಳಲ್ಲಿ ನಡೆದ 3000ದಿಂದ 5000 ಮೀಟರ್ ವರೆಗಿನ ಗುಡ್ಡಗಾಡು ಓಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.

ಅದರ ಜತೆಯಲ್ಲಿ ಹಾಕಿಯಲ್ಲಿ ಆಸಕ್ತಿ ಹೊಂದಿದ ಅವರು 2009 ರಿಂದಲೇ ಕರ್ನಾಟಕ, ತಮಿಳುನಾಡು, ಕೇರಳ, ಮದ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಭೋಪಾಲ್, ಹರಿಯಾಣ ಸೇರಿದಂತೆ ಇತರ ಕಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿ ಕೊಡಗಿನ ಸಾಧನೆಯನ್ನು ಎತ್ತಿ ಹಿಡಿದಿದ್ದಾರೆ. ಅಲ್ಲದೇ ಕಾಲೇಜು ಮಟ್ಟದ ಸೇರಿದಂತೆ ಬೆಂಗಳೂರಿನಲ್ಲಿ ನಡೆದ ಹಾಕಿ ಟೂರ್ನಿಗೆ ಅಂಪೈರ್ ಆಗಿ ಕೂಡ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚೆನ್ನೈ, ಆಂಧ್ರಪ್ರದೇಶ, ಶಿವಮೊಗ್ಗದಲ್ಲಿ ಹಾಕಿ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಮಾತ್ರವಲ್ಲ,ಕರ್ನಾಟಕ ಸಬ್ ಜೂನಿಯರ್, ಕಿರಿಯರ, ಹಿರಿಯರ ಮಹಿಳಾ ಹಾಕಿ ತಂಡಕ್ಕೆ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಅಂಕಿತ ಅವರು ಶಾಲಾ ಅವಧಿಯಲ್ಲಿಯೇ ಅಥ್ಲೇಟಿಕ್ಸ್ ಮತ್ತು ಹಾಕಿಯಲ್ಲಿ ನಿರಂತರವಾದ ಶ್ರಮವನ್ನು ಮಾಡಿದ್ದರಿಂದ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಹಿರಿಯ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಆಯ್ಕೆಯಾಗಲು ಸಹಾಯಕವಾಗಿದೆ.

ಟೋಕಿಯೊ ತಲುಪಿದ ತಂಡ: ಈಗಾಗಲೇ ಸಹಾಯಕ ಕೋಚ್ ಅಂಕಿತಾ ಅವರನ್ನು ಒಳಗೊಂಡ ಭಾರತದ ಮಹಿಳಾ ಹಾಕಿ ತಂಡ ಟೋಕಿಯೋಕ್ಕೆ ತಲುಪಿದೆ. ಅಂಕಿತಾ ಅವರ ಕೋಚಿಂಗ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗಳಿಸಲಿ ಎಂಬುದೇ ಕೊಡಗಿನ ಕ್ರೀಡಾಭಿಮಾನಿಗಳ, ಕ್ರೀಡಾಪಟುಗಳ ಆಶಯ

ಅಂಕಿತಾ ಅವರು ಬಿ.ಎ.ಸುರೇಶ್ ಮತ್ತು ಬಿ.ಎಸ್.ಧರ್ಮವತಿ ದಂಪತಿಯ ಪುತ್ರಿ. ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಅತ್ತೂರು ನಲ್ಲೂರು ಗ್ರಾಮದ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.