ADVERTISEMENT

U‍19 ರಾಜ್ಯ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್ ಫೈನಲ್‌ಗೆ ಅಭಿನವ್‌, ಅಶ್ವತಿ, ದಿಯಾ

ಸೀನಿಯರ್‌, 19 ವರ್ಷದೊಳಗಿನವರ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ: ಸಹರ್ಷ್‌ ಪ್ರಭುಗೆ ಜಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 16:07 IST
Last Updated 30 ಜುಲೈ 2025, 16:07 IST
ಅಭಿನವ್ ಗರ್ಗ್‌
ಅಭಿನವ್ ಗರ್ಗ್‌   

ಮಂಗಳೂರು: ಅಗ್ರ ಶ್ರೇಯಾಂಕದ ಆಟಗಾರ, ಬೆಂಗಳೂರಿನ ಅಭಿನವ್ ಗರ್ಗ್‌ ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಸೀನಿಯರ್ ಪುರುಷರ ಮತ್ತು 19 ವರ್ಷದೊಳಗಿನವರ ವಿಭಾಗಗಳಲ್ಲಿ ಪ್ರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.

ಸೀನಿಯರ್ ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೆಯಾಂಕದ ಅಶ್ವತಿ ವರ್ಗೀಸ್ ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ದಿಯಾ ಭೀಮಯ್ಯ ಅವರೂ 16ರ ಘಟ್ಟ ತಲುಪಿದರು. ಅರ್ಹತಾ ಸುತ್ತು ದಾಟಿಬಂದಿದ್ದ ದಕ್ಷಿಣ ಕನ್ನಡದ ಸಹರ್ಷ್ ಪ್ರಭು ಸೀನಿಯರ್ ಪುರುಷರ ವಿಭಾಗದಲ್ಲೂ ಶುಭಾರಂಭ ಮಾಡಿದರು. 

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಸಂಸ್ಥೆ ಉರ್ವ ಕ್ರೀಡಾ ಸಂಕೀರ್ಣದಲ್ಲಿಈ ಟೂರ್ನಿ ಆಯೋಜಿಸಿದೆ.

ADVERTISEMENT

19 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಅಭಿನವ್ ಗರ್ಗ್‌, ಕ್ವಾಲಿಫೈಯರ್‌ ತಿಲಕ್ ಬಿ.ಶೆಟ್ಟಿ (ಬೆಂಗಳೂರು) ವಿರುದ್ಧ 21–5, 21–9ರಲ್ಲಿ ಮತ್ತು ಸೀನಿಯರ್ ವಿಭಾಗದಲ್ಲಿ ರಾಘವೇಂದ್ರ ವಿರುದ್ಧ 21–17, 21–11ರಲ್ಲಿ ಜಯ ಸಾಧಿಸಿದರು.

ಬೆಂಗಳೂರಿನ ದಿಯಾ ಮೊದಲ ಸುತ್ತಿನಲ್ಲಿ ಗೀತಾಂಜಲಿ ಹರಿ ಅವರನ್ನು 21–13, 21–9ರಿಂದ ಮಣಿಸಿದರು. ಅಶ್ವತಿ ವರ್ಗೀಸ್‌ 21–12, 21–14ರಲ್ಲಿ ಗೌರಿ ಸತೀಶ್ ಎದುರು ಗೆಲುವು ದಾಖಲಿಸಿದರು. ಸಹರ್ಷ್‌ 21–15, 21–10ರಲ್ಲಿ ಪ್ರದ್ಯೋತ್ ರವಿ ವಿರುದ್ಧ ಗೆದ್ದು ಗಮನ ಸೆಳೆದರು. 

19 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಮಯೂಖ್‌, ಧ್ಯಾನ್ ಸಂತೋಷ್‌, ಕೌಶಿಕ್‌ ರೆಡ್ಡಿ, ಹಾರ್ದಿಕ್ ದಿವ್ಯಾಂಶ್‌, ಪೀಯೂಷ್ ತಿವಾರಿ, ಪ್ರದ್ಯೋತ್ ರವಿ, ರಿಶಾನ್ ಜೆರಿನ್‌, ಶ್ಯಾಮ್ ಬಿಂಡಿಗನವಿಲೆ, ಭವೇಶ್‌, ಪ್ರಣವ್‌, ಯಶಸ್‌, ಓಂಕಾರ್‌, ರೋಹನ್‌ ಶ್ರೀಸಾಯ್‌, ನಿಶ್ಚಲ್‌ ಲೋಹಿತ್ ಮೊದಲ ಸುತ್ತಿನ ಪಂದ್ಯಗಳನ್ನು ಗೆದ್ದುಕೊಂಡರು.

ಸೀನಿಯರ್ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಆದಿತ್ಯ ದಿವಾಕರ್‌, ಪ್ರಣವ್‌, ವೈಭವ್‌,  ಧ್ಯಾನ್ ಸಂತೋಷ್‌, ನಿಕೋಲಸ್‌ಗೆ, ತುಷಾರ್ ಸುವೀರ್‌, ಅಭಿನವ್ ಗರ್ಗ್‌, ಪ್ರವರ್ಚಿತ್‌, ಶ್ರೀಕರ್ ರಾಜೇಶ್‌, ಆದಿತ್ಯ ದಿವಾಕರ್‌ ಎರಡನೇ ಸುತ್ತಿಗೆ ಮುನ್ನಡೆದರು.

19 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಅನನ್ಯಶ್ರೀ, ತನಿಕಾ ಮೋಹನ್‌, ರಚನಾ, ನವ್ಯಾ, ಇಶಿಕಾ ಕಶ್ಯಪ್‌, ಬನಶ್ರೀ, ಅನ್ವಿತಾ ವಿಜಯ್‌, ಹರಿತಾ ಸತೀಶ್‌, ಕಾಮಾಕ್ಯ ರೆಡ್ಡಿ, ನಿಧಿ ಆತ್ಮಾರಾಮ್‌ ಎರಡನೇ ಸುತ್ತಿಗೆ ತಲುಪಿದರು.

ಅಶ್ವತಿ ವರ್ಗೀಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.