
ಬೆಂಗಳೂರು: ಉದಯೋನ್ಮುಖ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ‘ಕರ್ನಾಟಕ ಮಿನಿ ಕ್ರೀಡಾಕೂಟ’ ಇದೇ 2ರಿಂದ 9ರತನಕ ನಗರದಲ್ಲಿ ಆಯೋಜಿಸಲಾಗಿದೆ. 27 ವಿಭಾಗಗಳ ಸ್ಪರ್ಧೆಗಳಲ್ಲಿ 14 ವರ್ಷದೊಳಗಿನ ಸುಮಾರು 5 ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಸಹಭಾಗಿತ್ವದಲ್ಲಿ ನಡೆಯುವ ನಾಲ್ಕನೇ ಆವೃತ್ತಿಯ ಕೂಟಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ನ.2ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು ಎಂದು ಕೆಒಎ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರೂ ಆಗಿರುವ ಕೆ. ಗೋವಿಂದರಾಜ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಜಿಲ್ಲಾ ಸಂಘದ ಮೂಲಕ ಸ್ಪರ್ಧಿಗಳು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ. ವಿಜೇತರಿಗೆ ಪದಕ, ಟ್ರೋಫಿ ಸಿಗಲಿದೆ. ಕೂಟಕ್ಕೆ 400 ತಾಂತ್ರಿಕ ಸಿಬಂದಿಯ ನೆರವು ಪಡೆಯುತ್ತಿದ್ದೇವೆ’ ಎಂದು ಅವರು ತಿಳಿಸಿದರು.
27 ವಿಭಾಗಗಳಲ್ಲಿ ಸ್ಪರ್ಧೆ: ಕೂಟದಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಬಾಕ್ಸಿಂಗ್, ಕೆನೋಯಿಂಗ್ ಮತ್ತು ಕಯಾಕಿಂಗ್ , ಗಾಲ್ಫ್, ಸೈಕ್ಲಿಂಗ್, ಫುಟ್‌ಬಾಲ್, ಜಿಮ್ನಾಸ್ಟಿಕ್, ಹ್ಯಾಂಡ್ ಬಾಲ್, ಹಾಕಿ, ಜುಡೊ, ಕಬಡ್ಡಿ, ಕೊಕ್ಕೊ, ಟೆನಿಸ್, ನೆಟ್‌ಬಾಲ್, ರೇಡಿಂಗ್, ಫೆನ್ಸಿಂಗ್, ರೈಫಲ್ ಶೂಟಿಂಗ್, ಈಜು, ಟೇಬಲ್ ಟೆನಿಸ್, ಟೇಕ್ವಾಂಡೊ, ವಾಲಿಬಾಲ್, ವೇಟ್‌ಲಿಫ್ಟಿಂಗ್, ಕುಸ್ತಿ, ವುಶು ಸ್ಪರ್ಧೆಗಳು ನಡೆಯಲಿವೆ.
ಈ ಪೈಕಿ ಹ್ಯಾಂಡ್‌ಬಾಲ್, ನೆಟ್‌ಬಾಲ್ ಮತ್ತು ಕೊಕ್ಕೊ ಸ್ಪರ್ಧೆಗಳು ವಿದ್ಯಾನಗರದ ಡಿವೈಇಎಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ರೈಫಲ್ ಶೂಟಿಂಗ್ ಸ್ಪರ್ಧೆ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರದಲ್ಲಿ, ಸೈಕ್ಲಿಂಗ್ ಸ್ಪರ್ಧೆಯು ನೈಸ್ ರಸ್ತೆಯಲ್ಲಿ, ಫುಟ್‌ಬಾಲ್ ಪಂದ್ಯಾಟಗಳು ಕೆಎಸ್‌ಎಫ್ಎ ಕ್ರೀಡಾಂಗಣದಲ್ಲಿ, ಗಾಲ್ಫ್ ಸ್ಪರ್ಧೆಯು ಬೆಂಗಳೂರಿನ ಗಾಲ್ಫ್ ಕ್ಲಬ್‌ನಲ್ಲಿ, ಜಿಮ್ನಾಸ್ಟಿಕ್ ಸ್ಪರ್ಧೆಯು ವೈಟ್‌ಫೀಲ್ಡ್‌ನ ಗೋಪಾಲನ್ ಸ್ಪೋರ್ಟ್ ಸೆಂಟರ್‌ನಲ್ಲಿ, ಟೆನಿಸ್ ಸ್ಪರ್ಧೆಯು ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ನಡೆಯಲಿದೆ.
ರೇಡಿಂಗ್ ಸ್ಪರ್ಧೆಯು ಎಂಬೆಸಿ ಇಂಟರ್‌ನ್ಯಾಷನಲ್ ಹಾರ್ಸ್ ರೇಡಿಂಗ್ ಶಾಲೆಯಲ್ಲಿ, ಈಜು ಸ್ಪರ್ಧೆಯು ಹಲಸೂರು ಈಜುಕೊಳದಲ್ಲಿ, ಹಾಕಿ ಪಂದ್ಯಾಟಗಳು ಶಾಂತಿನಗರದ ಕಾರ್ಯಪ್ಪ ಹಾಕಿ ಅಕಾಡೆಮಿಯಲ್ಲಿ ನಡೆಯಲಿದೆ. ಉಳಿದೆಲ್ಲ ಸ್ಪರ್ಧೆಗಳನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಕೆಒಎ ಮಹಾ ಕಾರ್ಯದರ್ಶಿ ಟಿ.ಅನಂತರಾಜು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್. ಪೂರಕ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.