ADVERTISEMENT

ಜನವರಿಯಲ್ಲಿ ಮಿನಿ ಒಲಿಂಪಿಕ್ಸ್‌: ಗೋವಿಂದರಾಜ್

ಕ್ರೀಡಾಪಟುಗಳಿಗೆ ಕೆಒಎ ವಾರ್ಷಿಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 19:45 IST
Last Updated 26 ಡಿಸೆಂಬರ್ 2023, 19:45 IST
ರಾಜ್ಯಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ವಾರ್ಷಿಕ ಪ್ರಶಸ್ತಿಯನ್ನು ಕ್ರೀಡಾಪಟುಗಳು, ಕ್ರೀಡಾ ಆಡಳಿತಗಾರರಿಗೆ ಪ್ರದಾನ ಮಾಡಲಾಯಿತು. ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್, ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್,  ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಇದ್ದಾರೆ. – ಪ್ರಜಾವಾಣಿ ಚಿತ್ರ, ವಿ.‍ಪುಷ್ಕರ್‌ 
ರಾಜ್ಯಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ವಾರ್ಷಿಕ ಪ್ರಶಸ್ತಿಯನ್ನು ಕ್ರೀಡಾಪಟುಗಳು, ಕ್ರೀಡಾ ಆಡಳಿತಗಾರರಿಗೆ ಪ್ರದಾನ ಮಾಡಲಾಯಿತು. ಕೆಒಎ ಅಧ್ಯಕ್ಷ ಕೆ.ಗೋವಿಂದರಾಜ್, ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್,  ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಇದ್ದಾರೆ. – ಪ್ರಜಾವಾಣಿ ಚಿತ್ರ, ವಿ.‍ಪುಷ್ಕರ್‌     

ಬೆಂಗಳೂರು: ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮಿನಿ ಒಲಿಂಪಿಕ್ಸ್ ನಡೆಸಲಾಗುವುದು ಎಂದು ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಹೇಳಿದರು. 

ರಾಜಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರದಾನ  ಸಮಾರಂಭದಲ್ಲಿ ಮಾತನಾಡಿದರು. 

ಮಂಗಳೂರು ಅಥವಾ ಉಡುಪಿಯಲ್ಲಿ ಸೀನಿಯರ್ ಒಲಿಂಪಿಕ್ಸ್‌ ಆಯೋಜಿಸಲಾಗುವುದು. ಸೀನಿಯರ್‌ ಮತ್ತು ಜೂನಿಯರ್ ಒಲಿಂಪಿಕ್ಸ್‌ಗೆ ಸರ್ಕಾರ ಈಗಾಗಲೇ ಅನುದಾನ ಬಿಡುಗಡೆ ಮಾಡಿದೆ. ಸಾಧಕ ಕ್ರೀಡಾಪಟುಗಳಿಗೆ ನಿವೇಶನ ನೀಡುವುದು ಬಾಕಿ ಇದೆ. ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.

ADVERTISEMENT

ಕ್ರೀಡಾಪಟುಗಳು ವಲಸೆ ಹೋಗುವುದನ್ನು ತಡೆಯಲು ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು. 

ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ‘ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ರಾಜ್ಯದಲ್ಲಿ 15 ಸಿಂಥೆಟಿಕ್ ಟ್ರ್ಯಾಕ್‌ ನಿರ್ಮಿಸಲಾಗಿದೆ. ತವರು ಜಿಲ್ಲೆ ತುಮಕೂರಿನಲ್ಲಿ ₹57 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಶೇಕಡ 3ರಷ್ಟು ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು‘ ಎಂದರು. 

‘ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಆಗಬೇಕಿದೆ. ಅಮೆರಿಕ, ಚೀನಾ, ಯುರೋಪ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಇದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಬೆಂಗಳೂರಿನಲ್ಲಿ 70 ಎಕರೆ ಜಾಗದಲ್ಲಿ ಕ್ರೀಡಾ ನಗರಿ ನಿರ್ಮಿಸುವ ಬಗ್ಗೆ ಪ್ರಸ್ತಾವ ಇದೆ’ ಎಂದು ಹೇಳಿದರು. 

2023ನೇ ಸಾಲಿನ ಕರ್ನಾಟಕ ಒಲಿ‍ಂಪಿಕ್ ಸಂಸ್ಥೆಯ (ಕೆಒಎ) ವಾರ್ಷಿಕ ಪ್ರಶಸ್ತಿಯನ್ನು ಒಟ್ಟು 22 ಮಂದಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪ್ರದಾನ ಮಾಡಿದರು. ಕ್ರೀಡಾಪಟುಗಳು ಮತ್ತು ಪ್ರಶಸ್ತಿ ಪುರಸ್ಕೃತರು, ಏಷ್ಯನ್‌ ಗೇಮ್ಸ್‌ ಪ‍ದಕ ವಿಜೇತರಿಗೆ ತಲಾ ₹1ಲಕ್ಷ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಲಾಯಿತು. ಹಿರಿಯ (ವೆಟರನ್‌) ಕ್ರೀಡಾಪಟುಗಳು ಮತ್ತು ಕ್ರೀಡಾ ಆಡಳಿತಗಾರ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.  ಪ್ರಶಸ್ತಿ ಪುರಸ್ಕೃತರಲ್ಲಿ ‘ಪ್ರಜಾವಾಣಿ’ಯ ಕ್ರೀಡಾ ವಿಭಾಗದ ಮುಖ್ಯ ವರದಿಗಾರ ಗಿರೀಶ ದೊಡ್ಡಮನಿ ಸಹ ಇದ್ದಾರೆ.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ ನಾಗೇಂದ್ರ, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಆಯುಕ್ತ ಎನ್.ಶಶಿಕುಮಾರ್,  ಕೆಒಎ ಮಹಾಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜು‌ ಹಾಜರಿದ್ದರು.  

ನಾನು ವಿಶ್ವವಿದ್ಯಾಲಯ ಮಟ್ಟದಲ್ಲಿ ನೂರು ಮೀಟರ್‌ ಅನ್ನು 10.09 ಸೆಕೆಂಡ್‌ನಲ್ಲಿ ಓಡಿದ್ದೇನೆ. ಅಂದು ಮಣ್ಣಿನ ಟ್ರಾಕ್‌ನಲ್ಲಿ ಮಾಡಿದ ದಾಖಲೆ ಈಗಲೂ ಯಾರು ಮುರಿದಿಲ್ಲ. ಆ ದಾಖಲೆ ಮುರಿದವರಿಗೆ ನೀಡಲು ಚಿನ್ನದ ಪದಕ ಸಹ ಇಡಲಾಗಿದೆ.
ಜಿ.ಪರಮೇಶ್ವರ್ ಗೃಹ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.