
ಬೆಂಗಳೂರು: ಕರ್ನಾಟಕ ಬಾಲಕರ ತಂಡವು ಭಾನುವಾರ ನಗರದ ಗುಂಜೂರಿನಲ್ಲಿ ಮುಕ್ತಾಯಗೊಂಡ 44ನೇ ರಾಷ್ಟ್ರೀಯ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ಕರ್ನಾಟಕ ತಂಡವು ಫೈನಲ್‌ನಲ್ಲಿ 35–30ರಿಂದ ಮಹಾರಾಷ್ಟ್ರ ವಿರುದ್ಧ ರೋಚಕ ಜಯ ಸಾಧಿಸಿತು. ಕೊಲ್ಹಾಪುರ ಹಾಗೂ ಮಧ್ಯಭಾರತ ತಂಡಗಳು ಕಂಚು ಜಯಿಸಿದವು. ರಾಜ್ಯ ತಂಡದ ಬಿ.ವಿಜಯ್ ಅವರು ‘ವೀರ ಅಭಿಮನ್ಯು ಪ್ರಶಸ್ತಿ’ಗೆ ಹಾಗೂ ಪ್ರಜ್ವಲ್.ವೈ. ಅವರು ‘ಬೆಸ್ಟ್ ಡಿಫೆಂಡರ್’ ಪ್ರಶಸ್ತಿಗೆ ಭಾಜನರಾದರು.
ಸೆಮಿಫೈನಲ್ ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡವು 33–31ರಿಂದ ಕೊಲ್ಹಾಪುರ ತಂಡವನ್ನು ಹಾಗೂ ಕರ್ನಾಟಕ ತಂಡವು 33–20ರಿಂದ ಮಧ್ಯ ಭಾರತ ತಂಡವನ್ನು ಮಣಿಸಿದ್ದವು.
ತೀವ್ರ ಪೈಪೋಟಿ ಇದ್ದ ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಮಹಾರಾಷ್ಟ್ರ ತಂಡವು 34–33ರಿಂದ ಒಡಿಶಾ ತಂಡವನ್ನು ಮಣಿಸಿತು. ಪಂಜಾಬ್ ಹಾಗೂ ಕೊಲ್ಹಾಪುರ ತಂಡಗಳು ಕಂಚಿನ ಪದಕ ತಮ್ಮದಾಗಿಸಿಕೊಂಡವು. ನಾಲ್ಕರ ಘಟ್ಟದಲ್ಲಿ ಮಹಾರಾಷ್ಟ್ರ ತಂಡವು 28–14ರಿಂದ ಪಂಜಾಬ್ ವಿರುದ್ಧ ಹಾಗೂ ಒಡಿಶಾ 29–27ರಿಂದ ಕೊಲ್ಹಾಪುರ ವಿರುದ್ಧ ಜಯಗಳಿಸಿದ್ದವು.
ಗುಂಜೂರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದವು. ‘ಗುಂಜೂರು ಕೊಕ್ಕೊ ಕ್ಲಬ್’ ಆಯೋಜಿಸಿದ್ದ ಈ ಚಾಂಪಿಯನ್‌ಷಿಪ್‌ನಲ್ಲಿ ವಿವಿಧ ರಾಜ್ಯಗಳ 33 ತಂಡಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.