ADVERTISEMENT

ಕರ್ನಾಟಕ ಕುಸ್ತಿ ಹಬ್ಬ: ಲೀನಾ, ಸಂಗಮೇಶ ‘ಕರ್ನಾಟಕ ಕೇಸರಿ‌’

ಕೊನೆಯ ದಿನ ರೋಚಕ ಹೋರಾಟಕ್ಕೆ ಸಾಕ್ಷಿಯಾದ ಸೆಣಸಾಟಗಳು

ಪ್ರಮೋದ್
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST
ಮಂಗಳವಾರ ‘ಮಹಿಳಾ ಕರ್ನಾಟಕ ಕೇಸರಿ’ ಗೌರವ ಪಡೆದ ಲೀನಾ ಸಿದ್ದಿ (ಕೆಂಪು ಪೋಷಾಕು)‌ ಗದುಗಿನ ಶ್ವೇತಾ ಅವರನ್ನು ಚಿತ್‌ ಮಾಡಿದ ರೀತಿ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ
ಮಂಗಳವಾರ ‘ಮಹಿಳಾ ಕರ್ನಾಟಕ ಕೇಸರಿ’ ಗೌರವ ಪಡೆದ ಲೀನಾ ಸಿದ್ದಿ (ಕೆಂಪು ಪೋಷಾಕು)‌ ಗದುಗಿನ ಶ್ವೇತಾ ಅವರನ್ನು ಚಿತ್‌ ಮಾಡಿದ ರೀತಿ –ಪ್ರಜಾವಾಣಿ ಚಿತ್ರ/ಬಿ.ಎಂ. ಕೇದಾರನಾಥ   

ಧಾರವಾಡ: ಯಾರ ಮುಡಿಗೆ ಪಟ್ಟ ಎನ್ನುವ ಕುತೂಹಲಕ್ಕೆ ಕಾರಣವಾಗಿದ್ದ ಜಿದ್ದಾಜಿದ್ದಿಯ ಹೋರಾಟದಲ್ಲಿ ಗೆಲುವು ಸಾಧಿಸಿದ ಬೆಳಗಾವಿಯ ಸಂಗಮೇಶ್ವರ ಬಿರಾದಾರ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಮಂಗಳವಾರ ‘ಕರ್ನಾಟಕ ಕೇಸರಿ’ಯಾಗಿ ಹೊರಹೊಮ್ಮಿದರು.‌

ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ನಡೆದ86ರಿಂದ 125 ಕೆ.ಜಿ. ಒಳಗಿನವರ ವಿಭಾಗದ ಪಂದ್ಯದಲ್ಲಿ ಸಂಗಮೇಶ್ವರ 7–2 ಅಂಕಗಳಿಂದಬಾಗಲಕೋಟೆಯ ಬಸಪ್ಪ ಮಮದಾಪೂರ ಚಿಮ್ಮಡ ಎದುರು ವಿಜಯದ ಪತಾಕೆ ಹಾರಿಸಿ ₹3.5 ಲಕ್ಷ ನಗದು ಹಾಗೂ ಬೆಳ್ಳಿ ಗದೆ ತಮ್ಮದಾಗಿಸಿಕೊಂಡರು.

ಪ್ರತಿಷ್ಠಿತ ಹೋರಾ ಟವಾಗಿದ್ದಮಹಿಳೆಯರ 59ರಿಂದ 76 ಕೆ.ಜಿ. ಒಳಗಿನವರ ವಿಭಾಗದ ಸ್ಪರ್ಧೆಯಲ್ಲಿ ಉತ್ತರ ಕನ್ನಡದ ಲೀನಾ ಸಿದ್ದಿ ಏಳನೇ ನಿಮಿಷದಲ್ಲಿ ಗದುಗಿನ ಶ್ವೇತಾ ಅವರನ್ನು ಚಿತ್‌ ಮಾಡಿ ‘ಮಹಿಳಾ ಕರ್ನಾಟಕ ಕೇಸರಿ’ ಗೌರವಕ್ಕೆ ಭಾಜನರಾದರು.ಈ ಪ್ರಶಸ್ತಿ ₹1.5 ಲಕ್ಷ ನಗದು ಒಳಗೊಂಡಿದೆ.

ADVERTISEMENT

ಹಬ್ಬದ ಮೊದಲ ದಿನದಿಂದಲೂ ಕುಸ್ತಿ ಪ್ರೇಮಿಗಳ ಮನಗೆದ್ದಿದ್ದ 14 ವರ್ಷದ ಒಳಗಿನವರ 52 ಕೆ.ಜಿ. ವಿಭಾಗದಲ್ಲಿ ಗೆಲುವು ಸಾಧಿಸಿದಬಾಗಲಕೋಟೆಯ ಆದರ್ಶ ತೋಡದಾರ ‘ಬಾಲ ಕೇಸರಿ’ ಪ್ರಶಸ್ತಿ ಪಡೆದರು.

ಧಾರವಾದ ಸಚಿನ್‌ ಜೊತೆ ಚುರುಕಿನ ಪೈಪೋಟಿ ನಡೆಸಿದ ಆದರ್ಶ ಆರೂವರೆ ನಿಮಿಷದಲ್ಲಿ ಜಯದ ಕೇಕೆ ಹಾಕಿ ₹50 ಸಾವಿರ ಬಹುಮಾನ ಪಡೆದರು.

17 ವರ್ಷದ ಒಳಗಿನ ಬಾಲಕಿಯರ 53 ಕೆ.ಜಿ. ವಿಭಾಗದಲ್ಲಿ ‘ಕರ್ನಾಟಕ ಕಿಶೋರಿ’ ಪ್ರಶಸ್ತಿಗಾಗಿ ನಡೆದ ಹೋರಾಟದಲ್ಲಿ ಶಾಲಿನಿ ಸಿದ್ಧಿ6–2 ಅಂಕಗಳಲ್ಲಿಗಾಯತ್ರಿ ತಾಳೆ ಎದುರು ಜಯ ಸಾಧಿಸಿ ₹75 ಸಾವಿರ ನಗದು ಬಹುಮಾನ ಗಳಿಸಿದರು.

14 ವರ್ಷದ ಒಳಗಿನವರ 46 ಕೆ.ಜಿ. ವಿಭಾಗದಲ್ಲಿಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶ್ವೇತಾ ಅನ್ನಿಕೇರಿ 4–0 ಅಂಕಗಳಿಂದ ಬೆಳಗಾವಿಯ ಸ್ವಾತಿ ಎದುರು ಜಯ ಪಡೆದು ‘ಬಾಲ ಕೇಸರಿ’ ಗೌರವಕ್ಕೆ ಪಾತ್ರಳಾದಳು. ಈ ಪ್ರಶಸ್ತಿ ₹50 ಸಾವಿರ ನಗದು ಹೊಂದಿದೆ.

ಜಂಗೀ ನಿಕಾಲಿ ಕುಸ್ತಿಯ ರೋಚಕ ಹಣಾಹಣಿಯಲ್ಲಿ ಧಾರವಾಡ ತಾಲ್ಲೂಕಿನ ಸಿಂಗನಹಳ್ಳಿಯ ರಫೀಕ್‌ ಹೊಳಿ ಹರಿಯಾಣದ ಮದನ್‌ ವಿರುದ್ಧವೂ, ಖಾನಾಪುರ ತಾಲ್ಲೂಕಿನ ಕಿಕ್ಕೇರಿಯ ಲಕ್ಷ್ಮಿ ರೇಡೆಕರ ಉತ್ತರ ಪ್ರದೇಶದ ಸುಧಾ ಬಾಗೀಲ್‌ ಎದುರು ಗೆಲುವು ಪಡೆದರು. ಈ ಎರಡೂ ಪಂದ್ಯಗಳು ಮುಗಿದಾಗ ಸ್ಥಳೀಯ ಕುಸ್ತಿ ಪ್ರೇಮಿಗಳು ಎದ್ದು ನಿಂತು ಚಪ್ಪಾಳೆ ಹೊಡೆದು ಅಭಿನಂದಿಸಿದರು. ಪಂದ್ಯದುದ್ದಕ್ಕೂ ತವರೂರಿನ ಪೈಲ್ವಾನರಿಗೆ ಪ್ರೋತ್ಸಾಹ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.