ADVERTISEMENT

ರಾಷ್ಟ್ರೀಯ ಯೂತ್‌ ಅಥ್ಲೆಟಿಕ್ಸ್‌: ಕರ್ನಾಟಕದ ಗೌತಮಿಗೆ ಕಂಚು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:31 IST
Last Updated 11 ಮಾರ್ಚ್ 2023, 19:31 IST
ಗೌತಮಿ
ಗೌತಮಿ   

ಉಡುಪಿ: ಕರ್ನಾಟಕದ ಗೌತಮಿ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯೂತ್‌ ಅಥ್ಲೆಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಶನಿವಾರ ಒಟ್ಟು ಆರು ಕೂಟ ದಾಖಲೆಗಳು ನಿರ್ಮಾಣವಾದವು.

ಇಲ್ಲಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಬಾಲಕಿಯರ ಹೈಜಂಪ್‌ನಲ್ಲಿ ಅವರು 1.60 ಮೀಟರ್ಸ್ ಎತ್ತರ ಜಿಗಿದರು. ಹರಿಯಾಣದ ಪೂಜಾ (1.76 ಮೀ.) ಚಿನ್ನ ಮತ್ತು ಪಶ್ಚಿಮ ಬಂಗಾಳದ ಮೊಹುರ್ ಮುಖರ್ಜಿ (1.63 ಮೀ.) ಬೆಳ್ಳಿ ಜಯಿಸಿದರು.

ಬಾಲಕರ ಲಾಂಗ್‌ಜಂಪ್‌ನಲ್ಲಿ ಹರಿಯಾಣದ ಮೊಹಮ್ಮದ್ ಸಾಜಿದ್‌ (6.92 ಮೀ.), 100 ಮೀ. ಓಟದಲ್ಲಿ ಒಡಿಶಾದ ಮೊಹಮ್ಮದ್ ರೆಯಾನ್ ಬಾಷ (ಕಾಲ: 10.96 ಸೆ.), ಬಾಲಕಿಯರ ಇದೇ ಸ್ಪರ್ಧೆಯಲ್ಲಿ ಹರಿಯಾಣದ ನ್ಯಾನ್ಸಿ (12.05 ಮೀ.) ಚಿನ್ನ ಜಯಿಸಿದರು.

ADVERTISEMENT

ಬಾಲಕರ ಪೋಲ್‌ವಾಲ್ಟ್‌ನಲ್ಲಿ ಉತ್ತರಪ್ರದೇಶದ ಅಮನ್‌ ಸಿಂಗ್‌ (4.30 ಮೀ.), 1,500 ಮೀ. ಓಟದಲ್ಲಿ ಉತ್ತರಾಖಂಡದ ಪ್ರಿಯಾಂಶು (3 ನಿ. 54.20 ಸೆ. ಕೂಟ ದಾಖಲೆ; ಹಳೆಯದು: 3:57.21, ಹರೇಂದ್ರ ಕುಮಾರ್ 2019 ), ಬಾಲಕಿಯರ ಸ್ಪರ್ಧೆಯಲ್ಲಿ ತೆಲಂಗಾಣದ ಅಖಿಲಾ ಅವುತಾ (4 ನಿ. 45.31 ಸೆ.) ಅಗ್ರಸ್ಥಾನ ಗಳಿಸಿದರು.

ಬಾಲಕಿಯರ ಡಿಸ್ಕಸ್‌ ಥ್ರೊನಲ್ಲಿ ಹರಿಯಾಣದ ರಿದ್ಧಿ (43.37 ಮೀ. ಕೂಟ ದಾಖಲೆ; ಹಳೆಯದ್ದು: 46.07ಮೀ. ನಿಖಿತಾ ಕುಮಾರಿ 2022), ಟ್ರಿಪಲ್ ಜಂಪ್‌ನಲ್ಲಿ ತಮಿಳುನಾಡಿನ ಪ್ರವೀಣಾ ರಾಜೇಶ್‌ (11.93 ಮೀ. ಕೂಟ ದಾಖಲೆ; ಹಳೆಯದು: 12.73ಮೀ. ನೀತು ಮ್ಯಾಥ್ಯು, 2006), 400 ಮೀ. ಓಟದಲ್ಲಿ ಪಶ್ಚಿಮ ಬಂಗಾಳದ ರೆಜೊನಾ ಮಲಿಕ್ ಹೀನಾ (53.44 ಸೆ. ಕೂಟ ದಾಖಲೆ; ಹಳೆಯದು: 53.88ಸೆ. ಜಿಸ್ನಾ ಮ್ಯಾಥ್ಯು, 2016) ಚಿನ್ನ ಜಯಿಸಿದರು.

ಬಾಲಕರ ಶಾಟ್‌ಪಟ್‌ನಲ್ಲಿ ಮಹಾರಾಷ್ಟ್ರದ ಮಂಜೀತ್ ಕುಮಾರ್ ರಮೇಶ್‌ (17.25 ಮೀ.), 400 ಮೀ.ನಲ್ಲಿ ದೆಹಲಿಯ ನವಪ್ರೀತ್ ಸಿಂಗ್‌ (47.58 ಸೆ. ಕೂಟ ದಾಖಲೆ; ಹಳೆಯದ್ದು: 47.70 ಸೆ., ಸಂದೀಪ್‌) ಚಿನ್ನ ಗೆದ್ದರು. 110 ಮೀ. ಹರ್ಡಲ್ಸ್‌ನಲ್ಲಿ ಮಹಾರಾಷ್ಟ್ರದ ಸಂದೀಪ್ ವಿನೋದ್‌ ಗೊಂಡ (13.86 ಸೆ. ಕೂಟ ದಾಖಲೆ; ಹಳೆಯದ್ದು: ಅಭಿಷೇಕ್ ಉಬೆಮ್‌ 2017) ಕೂಡ ಅಗ್ರಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.