ADVERTISEMENT

ಖೇಲೊ ಇಂಡಿಯಾ ಅಥ್ಲೆಟಿಕ್ಸ್: ಯುವತಾರೆಗಳ ‘ಹೊಸ’ ಭರವಸೆ

ಖೇಲೊ ಇಂಡಿಯಾ ಅಥ್ಲೆಟಿಕ್ಸ್ ಇಂದಿನಿಂದ; ದ್ಯುತಿ, ಪ್ರಿಯಾ ಮೇಲೆ ಕಣ್ಣು; ಭರವಸೆಯಲ್ಲಿ ಮಂಗಳೂರು ವಿವಿ

ವಿಕ್ರಂ ಕಾಂತಿಕೆರೆ
Published 30 ಏಪ್ರಿಲ್ 2022, 2:21 IST
Last Updated 30 ಏಪ್ರಿಲ್ 2022, 2:21 IST
ಅಥ್ಲೆಟಿಕ್ಸ್‌ಗೆ ತಯಾರಿ
ಅಥ್ಲೆಟಿಕ್ಸ್‌ಗೆ ತಯಾರಿ   

ಬೆಂಗಳೂರು: ಎರಡು ವರ್ಷಗಳ ಕಾಮಗಾರಿಯ ನಂತರ ಕಂಠೀರವ ಕ್ರೀಡಾಂಗಣದ ಅಥ್ಲೆಟಿಕ್ ಟ್ರ್ಯಾಕ್ ಹೊಸತನದೊಂದಿಗೆ ಕಂಗೊಳಿಸುತಿದೆ. ಅತ್ಯಾಧುನಿಕ ಸಿಂಥೆಟಿಕ್ ಹಾಸು ಅಳವಡಿಸಿರುವ ಟ್ರ್ಯಾಕ್‌ನಲ್ಲಿ ಹೊಸ ಕನಸುಗಳೊಂದಿಗೆ ಯುವತಾರೆಗಳು ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಖೇಲೊ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಅಥ್ಲೆಟಿಕ್ಸ್‌ ಶನಿವಾರ ಆರಂಭಗೊಳ್ಳಲಿದ್ದು ಕಳೆದ ಬಾರಿಯ ಚಾಂಪಿಯನ್ ಮಂಗಳೂರು ವಿವಿ, ಈ ಬಾರಿಯ ವಾರ್ಸಿಟಿ ಕೂಟದ ರನ್ನರ್ ಅಪ್‌ ಕ್ಯಾಲಿಕಟ್‌ ವಿವಿ, ಆತಿಥೇಯ ಜೈನ್‌ ವಿವಿ ಮತ್ತು ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿವಿಗಳು ಭರವಸೆಯಲ್ಲಿವೆ.

ಒಡಿಶಾದಲ್ಲಿ 2020ರಲ್ಲಿ ನಡೆದ ಕ್ರೀಡಾಕೂಟದ ಮೊದಲ ಆವೃತ್ತಿಯ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿ ಮತ್ತು ಕೋಟಯಂನ ಮಹಾತ್ಮಗಾಂಧಿ ವಿವಿಗಳು ಜಿದ್ದಾಜಿದ್ದಿಯ ಪೈಪೋಟಿ ಒಡ್ಡಿದ್ದವು. ಈ ಬಾರಿ ಕೂಟಕ್ಕೆ ಆಯ್ಕೆಯಾಗಿರುವವರಲ್ಲಿ ಮಹಾತ್ಮಗಾಂಧಿ ವಿವಿಯ ಪ್ರಾಬಲ್ಯವಿಲ್ಲ. ಅಖಿಲ ಭಾರತ ಅಂತರ ವಾರ್ಸಿಟಿ ವಿವಿ ಕೂಟದಲ್ಲಿ ಮಂಗಳೂರು ವಿವಿ ಚಾಂಪಿಯನ್ ಆಗಿತ್ತು. ಅದೇ ಲಯದಲ್ಲಿ ಇಲ್ಲೂ ಸ್ಪರ್ಧಿಸಲು ಅಥ್ಲೀಟ್‌ಗಳು ಸಜ್ಜಾಗಿದ್ದಾರೆ.

ADVERTISEMENT

‍ಪುರುಷರ 400 ಮೀಟರ್ಸ್‌ ಮತ್ತು 800 ಮೀಟರ್ಸ್ ಓಟದಲ್ಲಿ ಕ್ರಮವಾಗಿ ನಿಹಾಲ್ ಜೋಯಲ್ ಮತ್ತು ದೇವಯ್ಯ ಕಣದಲ್ಲಿದ್ದಾರೆ. ಅಂತರ ವಾರ್ಸಿಟಿ ಕೂಟದ ಪುರುಷರ ಶಾಟ್‌ಪಟ್‌ನಲ್ಲಿ ಚಿನ್ನ ಗೆದ್ದ ವನಂ ಶರ್ಮಾ ಮತ್ತು ಮಹಿಳೆಯರ ವಿಭಾಗದಲ್ಲಿ ಕಂಚು ಗೆದ್ದ ರೇಖಾ, ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದಿರುವ ಶ್ರುತಿಲಕ್ಷ್ಮಿ ಅವರು ವಿವಿಗೆ ಪದಕ ಗೆದ್ದುಕೊಡುವ ನಿರೀಕ್ಷೆ ಮೂಡಿಸಿದ್ದಾರೆ.

‘ಪುರುಷರ 4x100 ಮತ್ತು 4x400 ಮೀ, ಮಹಿಳೆಯರ4x100 ಮೀ ರಿಲೆಯಲ್ಲೂ ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಅವಿನ್ ಕುಮಾರ್ ಕೆ ಹೇಳಿದರು.

ದ್ಯುತಿ ಚಾಂದ್‌, ಪ್ರಿಯಾ ಮೋಹನ್ ಮಿಂಚುವ ನಿರೀಕ್ಷೆ

ಜೈನ್‌ ವಿವಿಯನ್ನು ಪ್ರತಿನಿಧಿಸುತ್ತಿರುವ ಪ್ರಿಯಾ ಮೋಹನ್ ಎರಡು ವರ್ಷಗಳಿಂದ200 ಮತ್ತು 400 ಮೀಟರ್ಸ್‌ ಟ್ರ್ಯಾಕ್‌ನಲ್ಲಿ ಮಿಂಚುತ್ತಿದ್ದಾರೆ. ಅಂತರ ವಿವಿ ಕೂಟದ ಎರಡೂ ವಿಭಾಗಗಳಲ್ಲಿ ಅವರು ಚಿನ್ನದ ಸಾಧನೆ ಮಾಡಿದ್ದರು. 200 ಮೀಟರ್ಸ್‌ ಓಟದಲ್ಲಿ 24 ಸೆಕೆಂಡುಗಳಲ್ಲಿ ಗುರಿಮುಟ್ಟಿದ್ದರು. ತವರಿನಲ್ಲಿ, ವೈಯಕ್ತಿಕ ಸಾಧನೆ (23.96 ಸೆ) ಉತ್ತಮಪಡಿಸಲು ಪ್ರಯತ್ನಿಸಲಿದ್ದಾರೆ.

ಕೆಐಐಟಿಯ ಮಧುಮಿತಾ ದೇಬ್ ಮತ್ತು ಗುರುಜಂಬೇಶ್ವರ ವಿವಿಯ ಪ್ರೀತಿ ಅವರ ಸವಾಲನ್ನು ಪ್ರಿಯಾ ಮೀರಬೇಕಾಗಿದೆ. 400 ಮೀಟರ್ಸ್‌ನಲ್ಲೂ ಅವರು ಸಾಧನೆ ಉತ್ತಮಪಡಿಸುವ ನಿರೀಕ್ಷೆಯಲ್ಲಿದ್ದಾರೆ. 52.77 ಸೆಕೆಂಡುಗಳ ಸಾಧನೆಯನ್ನು ವಾರ್ಸಿಟಿ ಕೂಟದಲ್ಲಿ (52.58 ಸೆ) ಅವರು ಉತ್ತಮಪಡಿಸಿಕೊಂಡಿದ್ದರು. ಕೂಟ ದಾಖಲೆಯನ್ನೂ ಬರೆದಿದ್ದರು.

ವಾರ್ಸಿಟಿ ಕೂಟದಲ್ಲಿ ದಾಖಲೆಯೊಂದಿಗೆ (11.44 ಸೆ) 100 ಮೀಟರ್ಸ್ ಓಟದ ಚಿನ್ನ ಗೆದ್ದಿದ್ದ ದ್ಯುತಿ ಸ್ನಾಯು ಸೆಳೆತದಿಂದಾಗಿ 200 ಮೀಟರ್ಸ್ ಓಟದಲ್ಲಿ ಸ್ಪರ್ಧಿಸಿರಲಿಲ್ಲ. ಆದ್ದರಿಂದ ಬೆಂಗಳೂರಿನಲ್ಲಿ ಅವರು 100 ಮೀಟರ್ಸ್‌ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದರಿಂದ ಪ್ರಿಯಾ ಹಾದಿ ಸುಗಮವಾಗಿದೆ.

2019ರ ವಿಶ್ವ ವಾರ್ಸಿಟಿ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ದ್ಯುತಿ ಅವರಿಗೆ 100 ಮೀಟರ್ಸ್‌ನಲ್ಲಿ ಗುರುಜಂಬೇಶ್ವರ್‌ ವಿವಿಯ ಪ್ರೀತಿ ಮತ್ತು ಪುಣೆ ವಿವಿಯ ಅವಂತಿಕಾ ಪೈಪೋಟಿ ಒಡ್ಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.