ADVERTISEMENT

ಅದಿತಾ ಕುತ್ತಿಗೆಗೆ ಪೆಟ್ಟು: ಅಪಾಯದಿಂದ ಪಾರು

ಖೇಲೊ ಇಂಡಿಯಾ ಕ್ರೀಡಾಕೂಟ: ಅಭ್ಯಾಸದ ವೇಳೆ ಆಯಾತಪ್ಪಿ ಬಿದ್ದ ಜಿಮ್ನಾಸ್ಟ್‌

ಪಿಟಿಐ
Published 10 ಜನವರಿ 2020, 15:47 IST
Last Updated 10 ಜನವರಿ 2020, 15:47 IST

ಗುವಾಹಟಿ: ಖೇಲೊ ಇಂಡಿಯಾ ಯುವ ಕ್ರೀಡಾಕೂಟದ ಆರಂಭಕ್ಕೂ ಮುನ್ನ ಅವಘಡವೊಂದು ಸಂಭವಿಸಿದೆ.

ಪಶ್ಚಿಮ ಬಂಗಾಳದ 14 ವರ್ಷ ವಯಸ್ಸಿನ ಜಿಮ್ನಾಸ್ಟಿಕ್‌ ಪಟು ಅದಿತಾ ಮಂಡಲ್‌, ಅಭ್ಯಾಸದ ವೇಳೆ ಆಯಾತಪ್ಪಿ ಬಿದ್ದ ಪರಿಣಾಮ ಅವರ ಕುತ್ತಿಗೆ ಮತ್ತು ಬೆನ್ನುಹುರಿಗೆ ಪೆಟ್ಟಾಗಿದೆ. ಇದರಿಂದಾಗಿ ಕೂಟದಿಂದಲೇ ಹೊರಬಿದ್ದಿದ್ದಾರೆ.

ಕೋಲ್ಕತ್ತದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ತರಬೇತಿ ಪಡೆಯುತ್ತಿರುವ ಅದಿತಾ, ಗುರುವಾರ ಡಬಲ್‌ ಸಾಲ್ಟ್‌ ಬ್ಯಾಕ್‌ವರ್ಡ್‌ ಕೌಶಲ ಅಭ್ಯಾಸ ಮಾಡುತ್ತಿದ್ದ ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ.

ADVERTISEMENT

‘ಅದಿತಾಳ ಕತ್ತು ಮತ್ತು ಬೆನ್ನುಹುರಿಗೆ ಪೆಟ್ಟಾಗಿರುವುದು ಎಂ.ಆರ್‌.ಐ ಮತ್ತು ಎಕ್ಸ್‌ ರೇ ಸ್ಕ್ಯಾನಿಂಗ್‌ನಿಂದ ಗೊತ್ತಾಗಿದೆ. ಗಾಯವು ಗಂಭೀರ ಸ್ವರೂಪದ್ದಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕುತ್ತಿಗೆಯ ಭಾಗದಲ್ಲಿ ಇನ್ನೂ ನೋವಿರುವ ಕಾರಣ ಆಕೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ’ ಎಂದು ಸಾಯ್‌ ಕೋಚ್‌ ದಿಲೀಪ್‌ ದಾಸ್‌ ತಿಳಿಸಿದ್ದಾರೆ.

ಖೇಲೊ ಇಂಡಿಯಾ ಕೂಟದಲ್ಲಿ 37 ರಾಜ್ಯಗಳ 6,800 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಇದೇ ತಿಂಗಳ 22ರಂದು ಕೂಟದ ಸಮಾರೋಪ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.