ADVERTISEMENT

ಖೇಲೊ ಇಂಡಿಯಾ ಕ್ರೀಡಾಕೂಟ: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಸಂಜಯ್‌

ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಶ್ರೀನಿವಾಸ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 20:09 IST
Last Updated 12 ಜನವರಿ 2019, 20:09 IST
ಕರ್ನಾಟಕದ ಸಿ.ಜೆ.ಸಂಜಯ್‌ ಗುರಿಯತ್ತ ಮುನ್ನುಗ್ಗಿದರು
ಕರ್ನಾಟಕದ ಸಿ.ಜೆ.ಸಂಜಯ್‌ ಗುರಿಯತ್ತ ಮುನ್ನುಗ್ಗಿದರು   

ಪುಣೆ: ಮಿಂಚಿನ ಗತಿಯಲ್ಲಿ ಗುರಿಯತ್ತ ಮುನ್ನುಗ್ಗಿದ ಕರ್ನಾಟಕದ ಸಿ.ಜೆ.ಸಂಜಯ್‌, ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಶನಿವಾರ ನಡೆದ 17 ವರ್ಷದೊಳಗಿನ ಬಾಲಕರ 400 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಸಂಜಯ್‌ 4 ನಿಮಿಷ 13.36 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಸಂಭ್ರಮಿಸಿದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೋಹಿತ್‌ ವೆಂಕಟೇಶ್‌ ಕಂಚಿನ ಪದಕ ಜಯಿಸಿದರು. ಅವರು ನಿಗದಿತ ದೂರ ಕ್ರಮಿಸಲು 4 ನಿಮಿಷ 17.78 ಸೆಕೆಂಡು ತೆಗೆದುಕೊಂಡರು.

ADVERTISEMENT

ಪಿ.ಕುಶಾಲ್‌ (4:23.24ಸೆ.) ಮತ್ತು ಶಾಂಭವ್‌ (4:26.41ಸೆ.) ಕ್ರಮವಾಗಿ ಐದು ಮತ್ತು ಏಳನೇ ಸ್ಥಾನ ಪಡೆದರು.

100 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಕಣದಲ್ಲಿದ್ದ ಪ್ರಸಿದ್ಧ ಕೃಷ್ಣ (59.99ಸೆ.) ಏಳನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ಬಾಲಕರ 4X100 ಮೀಟರ್ಸ್ ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕ (4:08.06ಸೆ.) ಕಂಚಿನ ಪದಕ ಪಡೆಯಿತು.

21 ವರ್ಷದೊಳಗಿನ ಬಾಲಕರ 100 ಮೀಟರ್ಸ್‌ ಬಟರ್‌ಫ್ಲೈಯಲ್ಲಿ ಅವಿನಾಶ್‌ ಮಣಿ ಬೆಳ್ಳಿಯ ಪದಕ ಗೆದ್ದರು. ಅವರು 57.30 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಮಹಿಳೆಯರ 100 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ದೀಕ್ಷಾ ರಮೇಶ್‌ 1 ನಿಮಿಷ 02.68 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಪದಕ ಪಡೆದರು. ಎಚ್‌.ಎಂ.ಪ್ರೇಕ್ಷಾ (1:04.12ಸೆ.) ಮತ್ತು ಎಸ್‌.ವಿ.ನಿಕಿತಾ (1:07.22ಸೆ.) ಕ್ರಮವಾಗಿ ನಾಲ್ಕು ಮತ್ತು ಏಳನೇ ಸ್ಥಾನಗಳಿಗೆ ತೃಪ್ತಿಪಟ್ಟರು.

4X100 ಮೀಟರ್ಸ್‌ ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್‌, ಅವಿನಾಶ್‌ ಮಣಿ, ಶಿವ ಶ್ರೀಧರ್‌ ಮತ್ತು ಎಸ್‌.ಪಿ.ಲಿಖಿತ್‌ ಅವರಿದ್ದ ಕರ್ನಾಟಕ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿತು.

ಫೈನಲ್‌ನಲ್ಲಿ ಕರ್ನಾಟಕ 3 ನಿಮಿಷ 56.38 ಸೆಕೆಂಡುಗಳ ಸಾಮರ್ಥ್ಯ ತೋರಿತು.

ಶ್ರೀನಿವಾಸ್‌ಗೆ ಬೆಳ್ಳಿ
ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಇ.ಶ್ರೀನಿವಾಸ್‌ ಬೆಳ್ಳಿಯ ಪದಕ ಜಯಿಸಿದರು.

ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ಶ್ರೀನಿವಾಸ್‌, 21 ವರ್ಷದೊಳಗಿನ ವಿಭಾಗದ 74 ಕೆ.ಜಿ. ಸ್ಪರ್ಧೆಯ ಫೈನಲ್‌ನಲ್ಲಿ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.