ನವದೆಹಲಿ: ರಾಜಸ್ಥಾನದ ಶೂಟರ್ ಮಯಂಕ್ ಚೌಧರಿ ಅವರು ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಮಂಗಳವಾರ ತಮ್ಮ ಎರಡನೇ ಚಿನ್ನ ಗೆದ್ದರು.
ಮಿಶ್ರ ತಂಡ ವಿಭಾಗದಲ್ಲಿ ಸೋಮವಾರ ಚಿನ್ನದ ಸಾಧನೆ ಮಾಡಿದ್ದ ಮಯಂಕ್, ಬಾಲಕರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 239.2 ಸ್ಕೋರ್‌ನೊಂದಿಗೆ ಅಗ್ರಸ್ಥಾನಿಯಾದರು. ಚಂಡೀಗಢದ ಧೈರ್ಯ ಪ್ರಶಾರ್ (235.3) ಮತ್ತು ಮಧ್ಯಪ್ರದೇಶದ ಯುಗ್ ಪ್ರತಾಪ್ ಸಿಂಗ್ ರಾಥೋಡ್ (214.8) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದರು.
ಮಹಾರಾಷ್ಟ್ರದ ಪ್ರಾಚಿ ಗಾಯಕವಾಡ್ (458.4) ಅವರು ಬಾಲಕಿಯರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಕರ್ನಾಟಕದ ತಿಲೋತ್ತಮ ಸೇನ್ (455.6) ಅವರನ್ನು ಹಿಂದಿಕ್ಕಿ ಸ್ವರ್ಣ ಗೆದ್ದರು. ಕಳೆದ ಆವೃತ್ತಿಯಲ್ಲಿ ಪ್ರಾಚಿ ಕಂಚಿನ ಪದಕ ಗೆದ್ದಿದ್ದರು. ತಿಲೋತ್ತಮ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.