ADVERTISEMENT

ಎಲೀಟ್‌ ಅಥ್ಲೀಟ್‌ಗಳ ಅಭ್ಯಾಸಕ್ಕಷ್ಟೇ ಅವಕಾಶ: ರಿಜಿಜು

ಪಿಟಿಐ
Published 11 ಮೇ 2020, 19:30 IST
Last Updated 11 ಮೇ 2020, 19:30 IST
   

ನವದೆಹಲಿ: ‘ಲಾಕ್‌ಡೌನ್‌ ತೆರವುಗೊಂಡ ಬಳಿಕ ಎಲೀಟ್‌ ಅಥ್ಲೀಟ್‌ಗಳ ಅಭ್ಯಾಸಕ್ಕಷ್ಟೇ ಅವಕಾಶ ನೀಡಲಾಗುತ್ತದೆ’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು, ಸೋಮವಾರ ಸ್ಪಷ್ಟಪಡಿಸಿದ್ದಾರೆ.

‘ಲಾಕ್‌ಡೌನ್‌ ತೆರವಾದ ನಂತರ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರಗಳಲ್ಲಿ ಹಂತ ಹಂತವಾಗಿ ತರಬೇತಿ ಶಿಬಿರಗಳನ್ನು ಪುನರಾರಂಭಿಸಲಾಗುತ್ತದೆ. ಕ್ರೀಡಾಪಟುಗಳ ಸುರಕ್ಷತೆಯೇ ನಮ್ಮ ಆದ್ಯತೆ. ಹೀಗಾಗಿ ಇತರ ಅಥ್ಲೀಟ್‌ಗಳು ಹಾಗೂ ಫೆಡರೇಷನ್‌ಗಳು ಕೊರೊನಾ ವೈರಾಣುವಿನ ಬಿಕ್ಕಟ್ಟು ಬಗೆಹರಿಯುವವರೆಗೂ ಸಾವಧಾನದಿಂದ ಇರಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಮೇ ಮೂರರಿಂದಲೇ ತರಬೇತಿ ಶಿಬಿರಗಳನ್ನು ಪುನರಾರಂಭಿಸುವ ಆಲೋಚನೆ ಇತ್ತು. ಲಾಕ್‌ಡೌನ್‌ ವಿಸ್ತರಣೆಯಾದ ಕಾರಣ ನಾವು ಆ ನಿರ್ಧಾರದಿಂದ ಅನಿವಾರ್ಯವಾಗಿ ಹಿಂದೆ ಸರಿದಿದ್ದೆವು. ಕೇಂದ್ರ ಸರ್ಕಾರವು ಹಲವು ಕ್ಷೇತ್ರಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದೆ. ಆದರೆ ಕ್ರೀಡಾ ಕ್ಷೇತ್ರದ ಮೇಲಿನ ನಿರ್ಬಂಧವನ್ನು ಮುಂದುವರಿಸಿದೆ. ಹೀಗಾಗಿ ನಾವು ತಕ್ಷಣವೇ ಯಾವ ನಿರ್ಧಾರವನ್ನೂ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಕಾಯುವಿಕೆಯೊಂದೇ ಈಗ ನಮ್ಮ ಮುಂದಿರುವ ಮಾರ್ಗ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ತರಬೇತಿಗೆ ಅನುವು ಮಾಡಿಕೊಡಲುವೇಟ್‌ಲಿಫ್ಟರ್‌ಗಳ ಮನವಿ

ನವದೆಹಲಿ: ಸಾಧ್ಯವಾದಷ್ಟು ಬೇಗ ತರಬೇತಿಗೆ ಅನುವು ಮಾಡಿಕೊಡಬೇಕೆಂದು ಭಾರತದ ಪ್ರಮುಖ ವೇಟ್‌ಲಿಫ್ಟರ್‌ಗಳು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಮನವಿ ಮಾಡಿದ್ದಾರೆ.

ಕೊರೊನಾ ವೈರಾಣು ಸೋಂಕು ಭೀತಿಯಿಂದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಎಲ್ಲಾ ಕೇಂದ್ರಗಳಲ್ಲೂ ತರಬೇತಿಗೆ ತಡೆಯೊಡ್ಡಲಾಗಿದೆ.

ಪಟಿಯಾಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಎನ್‌ಐಎಸ್‌) ಕೇಂದ್ರದಲ್ಲಿರುವ ವೇಟ್‌ಲಿಫ್ಟರ್‌ಗಳ ಜೊತೆ ರಿಜಿಜು ಅವರು ಸೋಮವಾರ ವಿಡಿಯೊ ಕಾನ್ಫರೆನ್ಸ್‌ ನಡೆಸಿದರು.

ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ವ್ಯವಸ್ಥಾಪಕ ನಿರ್ದೇಶಕ ಸಂದೀಪ್‌ ಪ್ರಧಾನ್‌, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ರವಿ ಮಿತ್ತಲ್‌, ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಸ್ಕೀಮ್‌ (ಟಾಪ್ಸ್‌) ಹಾಗೂ ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಅಧಿಕಾರಿಗಳೂ ಇದರಲ್ಲಿ ಪಾಲ್ಗೊಂಡಿದ್ದರು.

‘ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅಗತ್ಯವಿರುವ ವ್ಯಾಯಾಮಗಳನ್ನು ನಾವು ಮಾಡುತ್ತಿದ್ದೇವೆ. ನಿತ್ಯವೂ ಭಾರ ಎತ್ತುವ ಅಭ್ಯಾಸ ಮಾಡುವುದು ಅತ್ಯವಶ್ಯ. ಹೀಗಾಗಿ ಸಾಧ್ಯವಾದಷ್ಟು ಬೇಗ ತರಬೇತಿ ಶಿಬಿರಗಳನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದೇವೆ’ ಎಂದುವಿಶ್ವಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಮೀರಾಬಾಯಿ ಚಾನು ತಿಳಿಸಿದ್ದಾರೆ.

‘ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ವಾರದೊಳಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದೂ ಮೀರಾಬಾಯಿ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.