ADVERTISEMENT

ಕೊಕ್ಕೊ ತಂಡದ ಆಯ್ಕೆ ಪಾರದರ್ಶಕವಾಗಿದೆ: ಕ್ರೀಡಾ ಇಲಾಖೆ ಆಯುಕ್ತ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 17:42 IST
Last Updated 4 ಜನವರಿ 2019, 17:42 IST

ಬೆಂಗಳೂರು: ‘ಪುಣೆಯಲ್ಲಿ ಇದೇ ಒಂಬತ್ತರಿಂದ ನಡೆಯಲಿರುವ ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ (ಕೆಐವೈಜಿ) ಪಾಲ್ಗೊಳ್ಳುವ ರಾಜ್ಯ ಕೊಕ್ಕೊ ತಂಡದ ಆಯ್ಕೆ ಪಾರದರ್ಶಕ ವಾಗಿದೆ’ ಎಂದು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

‘ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನಮಗೆ ಅನುಮತಿ ನೀಡಿಲ್ಲ’ ಎಂದು ಆಕ್ಷೇಪಿಸಿ ಕರ್ನಾಟಕ ರಾಜ್ಯ ಕೊಕ್ಕೊ ಅಸೋಸಿಯೇಷನ್ ಕಾರ್ಯದರ್ಶಿ ಆರ್‌.ಮಲ್ಲಿಕಾರ್ಜುನಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲ ವಿ.ಶ್ರೀನಿಧಿ, ‘ಕರ್ನಾಟಕ ರಾಜ್ಯ ಕೊಕ್ಕೊ ಅಸೋಸಿಯೇಷನ್‌ 2018–19ರ ಸಾಲಿನ ನವೀಕರಣ ಹೊಂದಿಲ್ಲ. ಅಂತೆಯೇ ಸಂಸ್ಥೆಯ ಆಡಳಿತ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಕ್ರೀಡಾಳು ಗಳಿಂದ ದೂರುಗಳು ಬಂದಿವೆ. ಹೀಗಾಗಿ ಅಮೆಚೂರ್‌ ಕೊಕ್ಕೊ ಅಸೋಸಿಯೇಷನ್‌ ವತಿಯಿಂದ ಆಯ್ಕೆ ನಡೆಸಲಾಗಿದೆ’ ಎಂದು ಮೌಖಿಕವಾಗಿ ವಿವರಿಸಿದರು.

ADVERTISEMENT

‘ಈ ಪ್ರಕರಣದಲ್ಲಿ ಅರ್ಜಿದಾರರು ಬಾಧಿತರಲ್ಲ, ಅಂತೆಯೇ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಕಾನೂನು ಬದ್ಧವಾಗಿ ನಡೆದಿದೆ’ ಎಂದು ತಿಳಿಸಿದರು. ಪೂರ್ಣ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕೆಂಬ ಸರ್ಕಾರದ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

‘ರಾಜ್ಯ ಕೊಕ್ಕೊ ಅಸೋಸಿಯೇಷನ್ ನೀಡಿರುವ ಆಯ್ಕೆ ಪಟ್ಟಿಗೆ ಅನುಮತಿ ನೀಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.