ADVERTISEMENT

ಮಿಂಚಿದ ಹಂಪಿ: ಫೈನಲ್‌ಗೆ ಭಾರತ

ಆನ್‌ಲೈನ್‌ ಚೆಸ್‌ ಒಲಿಂಪಿಯಾಡ್‌: ಪೋಲೆಂಡ್‌ಗೆ ಸೋಲುಣಿಸಿದ ವಿಧಿತ್‌ ಪಡೆ

ಪಿಟಿಐ
Published 29 ಆಗಸ್ಟ್ 2020, 14:04 IST
Last Updated 29 ಆಗಸ್ಟ್ 2020, 14:04 IST
ಕೊನೇರು ಹಂಪಿ
ಕೊನೇರು ಹಂಪಿ   

ಚೆನ್ನೈ: ನಿರ್ಣಾಯಕ ಹಂತದಲ್ಲಿ ಮಿಂಚಿದ ಕೊನೇರು ಹಂಪಿ ಅವರು ಫಿಡೆ ಆನ್‌ಲೈನ್‌ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಭಾರತ, ಪೋಲೆಂಡ್‌ ತಂಡವನ್ನು ಮಣಿಸಿತು.

ನಿರ್ಣಾಯಕ ಪಂದ್ಯದಲ್ಲಿ ಕೊನೇರು ಹಂಪಿ ಅವರು ಮೋನಿಕಾ ಸೊಕೊ ಅವರನ್ನು ಪರಾಭವಗೊಳಿಸಿದರು.

ಮೊದಲ ಎರಡು ಸುತ್ತುಗಳ ಪೈಕಿ ಭಾರತ ಹಾಗೂ ಪೋಲೆಂಡ್‌ ತಂಡಗಳು ತಲಾ ಒಂದು ಸುತ್ತಿನಲ್ಲಿ ಜಯಗಳಿಸಿದ್ದವು. ಆರ್ಮಾಗೆಡಾನ್‌ (ಟೈ ಬ್ರೇಕ್‌) ಹಣಾಹಣಿಯಲ್ಲಿ ಕಪ್ಪುಕಾಯಿಗಳೊಂದಿಗೆ ಆಡಿದ ವಿಶ್ವ ರ‍್ಯಾಪಿಡ್‌ ವಿಭಾಗದ ಚಾಂಪಿಯನ್‌ ಹಂಪಿ, ಸೊಕೊ ಅವರಿಗೆ ಸೋಲುಣಿಸಿದರು.

ADVERTISEMENT

ಮತ್ತೊಂದು ಸೆಮಿಫೈನಲ್‌ ಪಂದ್ಯ ರಷ್ಯಾ ಹಾಗೂ ಅಮೆರಿಕಾ ನಡುವೆ ನಡೆಯಲಿದ್ದು, ಇಲ್ಲಿ ಗೆದ್ದವರನ್ನು ಭಾರತ ಫೈನಲ್‌ನಲ್ಲಿ ಎದುರಿಸಲಿದೆ. ಫೈನಲ್‌ ಪಂದ್ಯ ಭಾನುವಾರ ನಡೆಯಲಿದೆ.

ನಾಲ್ಕರ ಘಟ್ಟದ ಮೊದಲ ಸುತ್ತಿನಲ್ಲಿ ಭಾರತ 2–4ರಿಂದ ಸೋತಿತ್ತು. ಎರಡನೇ ಸುತ್ತಿನಲ್ಲಿ 4.5–1.5ರಿಂದ ಗೆದ್ದು ತಿರುಗೇಟು ನೀಡಿತು.

ಮೊದಲ ಸುತ್ತಿನಲ್ಲಿ ವಿಶ್ವನಾಥನ್ ಆನಂದ್‌ ಅವರು ಜಾನ್‌ ಕ್ರಿಸ್ಟಾಫ್ ಡುಡಾ ಎದುರು ಸೋತು ಎರಡನೇ ಸುತ್ತಿನಲ್ಲಿ ಅದೇ ಎದುರಾಳಿಯನ್ನು ಮಣಿಸಿದರು.

ಎರಡನೇ ಸುತ್ತಿನಲ್ಲಿ ಭಾರತ ತಂಡದ ನಾಯಕ ವಿದಿತ್‌ ಗುಜರಾತಿ ಅವರು ಗೆಗೊರ್‌ ಗಜೆಸ್ವಿಕಿ ಎದುರು ಗೆದ್ದರೆ, ಹಂಪಿ ಹಾಗೂ ದ್ರೋಣವಳ್ಳಿ ಹರಿಕಾ ಅವರೂ ತಮ್ಮ ಪಂದ್ಯಗಳಲ್ಲಿ ಜಯ ಸಾಧಿಸಿದರು. ನಿಹಾಲ್‌ ಸರಿನ್‌ ಸ್ಥಾನದಲ್ಲಿ ಆಡಿದ ಆರ್‌. ಪ್ರಗ್ನಾನಂದ ಅವರು ಇಗರ್‌ ಜಾನಿಕ್‌ ಎದುರು ಸೋತರೆ, ವಂತಿಕಾ ಅಗರವಾಲ್‌ ಅವರು ಅಲಿಜಾ ಸಿಲ್ವಿಕಾ ಅವರೊಡನೆ ಡ್ರಾ ಮಾಡಿಕೊಂಡರು.

ಮೊದಲ ಸುತ್ತಿನಲ್ಲಿ ವಿದಿತ್‌ ಅವರು ರಾಡೊಸ್ಲಾವ್‌ ವೊತಸ್ಜೆಕ್‌ ಎದುರು ಹಾಗೂ ದಿವ್ಯಾ ದೇಶಮುಖ್‌ ಅವರುಅಲಿಜಾ ಸಿಲ್ವಿಕಾ ವಿರುದ್ಧ ಸೋತಿದ್ದರು.ಹಂಪಿ ಹಾಗೂ ಹರಿಕಾ ಕ್ರಮವಾಗಿ ಸೊಕೊ ಹಾಗೂ ಕ್ಯಾರಿನಾ ಸಿಫಿಕಾ ಎದುರು ಡ್ರಾ ಮಾಡಿಕೊಂಡಿದ್ದರು. ಸರಿನ್‌ ಅವರು ಇಗರ್ ಜಾನಿಕ್‌ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.