ADVERTISEMENT

Tokyo Olympics: ಚಿನ್ನ ಗೆದ್ದ ಕೊರ್ಡಾ; ಅದಿತಿಗೆ ನಿರಾಸೆ

ಅಮೆರಿಕ ‘ಡಬಲ್‌’ ಚಿನ್ನದ ಸಾಧನೆ; ಜಪಾನ್‌ಗೆ ಗಾಲ್ಫ್‌ನಲ್ಲಿ ಮೊದಲ ಪದಕ

ಏಜೆನ್ಸೀಸ್
Published 7 ಆಗಸ್ಟ್ 2021, 20:26 IST
Last Updated 7 ಆಗಸ್ಟ್ 2021, 20:26 IST
ಅದಿತಿ ಅಶೋಕ್ –ರಾಯಿಟರ್ಸ್ ಚಿತ್ರ
ಅದಿತಿ ಅಶೋಕ್ –ರಾಯಿಟರ್ಸ್ ಚಿತ್ರ   

ಕವಾಗೆ, ಜಪಾನ್: ಹವಾಮಾನ ವೈಪರೀತ್ಯದಿಂದಾಗಿ ಬೀಸಿದ ಪ್ರಬಲ ಗಾಳಿಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದರೂ ಅಮೆರಿಕದ ನೆಲ್ಲಿ ಕೊರ್ಡಾ ಅವರ ಚಿನ್ನದ ಕನಸಿನ ಓಟಕ್ಕೆ ಭಂಗವಾಗಲಿಲ್ಲ. ಒಲಿಂಪಿಕ್ಸ್‌ ಗಾಲ್ಫ್‌ನಲ್ಲಿ ಆರಂಭದಿಂದ ಕೊನೆಯ ವರೆಗೂ ಮುನ್ನಡೆ ಕಾಯ್ದುಕೊಂಡ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದರು. ಶುಕ್ರವಾರ ಸಂಜೆಯ ವರೆಗೂ ಪದಕದ ಭರವಸೆ ಮೂಡಿಸಿದ್ದ ಭಾರತದ ಅದಿತಿ ಅಶೋಕ್ ನಿರಾಸೆ ಅನುಭವಿಸಿದರು.

ವಿಶ್ವದ ಒಂದನೇ ಕ್ರಮಾಂಕದ ಆಟಗಾರ್ತಿ ನೆಲ್ಲಿ ಕೊರ್ಡಾ ಅವರು ನ್ಯೂಜಿಲೆಂಡ್‌ನ ಲಿಡಿಯಾ ಕೊ ಮತ್ತು ಜಪಾನ್‌ನ ಇನಾಮಿ ಮೊನೆ ಅವರಿಗಿಂತ ಒಂದು ಸ್ಟ್ರೋಕ್ ಮುನ್ನಡೆ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಬೆಳ್ಳಿ ಪದಕಕ್ಕಾಗಿ ನಡೆದ ಪ್ಲೇ ಆಫ್‌ ಹಣಾಹಣಿಯಲ್ಲಿ ರಿಯೊ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಲಿಡಿಯಾ ಕೊ ಅವರು ಪಾರ್‌ ಗಳಿಸುವ ಯತ್ನದಲ್ಲಿ 10 ಅಡಿ ದೂರದ ಪುಟ್‌ನಲ್ಲಿ ವೈಫಲ್ಯ ಕಂಡರು. ಹೀಗಾಗಿ ಇನಾಮಿ ಬೆಳ್ಳಿ ಗೆದ್ದು ಒಲಿಂಪಿಕ್ಸ್‌ ಗಾಲ್ಫ್‌ನಲ್ಲಿ ಜಪಾನ್‌ಗೆ ಮೊದಲ ಪದಕ ಗೆದ್ದುಕೊಟ್ಟರು.

ನೆಲ್ಲಿ ಕೊರ್ಡಾ ಅವರ ಸುಗಮ ಓಟಕ್ಕೆ ಗಾಳಿ ಕೆಲ ಹೊತ್ತು ಅಡ್ಡಿಯಾಯಿತು. ಒಂದು ತಾಸು ಆಟವನ್ನು ಸ್ಥಗಿತಗೊಳಿಸಲಾಯಿತು. ಪಂದ್ಯ ಪುನರಾರಂಭಗೊಂಡಾಗ ಜಪಾನ್ ಆಟಗಾರ್ತಿಯಿಂದ ಭಾರಿ ಪೈಪೋಟಿ ಎದುರಾಯಿತು. ನ್ಯೂಜಿಲೆಂಡ್ ಗಾಲ್ಫರ್ ಕೂಡ ಕಣದಲ್ಲಿ ಮಿಂಚಿದರು. ಅಗ್ರ ಸ್ಥಾನ ಟೈಗೊಂಡ ಕಾರಣ ಚಿನ್ನದ ಪದಕಕ್ಕಾಗಿ ಪ್ಲೇ ಆಫ್‌ ಹಣಾಹಣಿ ನಡೆಯಿತು.

ADVERTISEMENT

ಅರಗಿಸಿಕೊಳ್ಳುವುದು ಕಷ್ಟ: ಅದಿತಿ

ಆರಂಭದಿಂದ ಉತ್ತಮ ಸಾಮರ್ಥ್ಯ ತೋರಿದ್ದರೂ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದ ಸಂಕಟವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅದಿತಿ ಅಶೋಕ್ ಅಭಿಪ್ರಾಯಪಟ್ಟರು. ಮೂರನೇ ದಿನವಾದ ಶುಕ್ರವಾರ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ಅದಿತಿ ಶನಿವಾರ ಅನಿರೀಕ್ಷಿತ ಹಿನ್ನಡೆ ಕಂಡರು.

‘ನನ್ನಿಂದಾದ ಎಲ್ಲ ಬಗೆಯ ಪ್ರಯತ್ನವನ್ನೂ ಮಾಡಿದೆ. ಕೊನೆಯಲ್ಲಿ ಅತ್ಯುತ್ತಮವಾಗಿ ಆಡಿದೆ. ಬೇರೆ ಯಾವುದೇ ಟೂರ್ನಿಯಲ್ಲಾದರೆ ಎರಡು ಅಥವಾ ನಾಲ್ಕನೇ ಸ್ಥಾನ ಗಳಿಸಿದರೆ ಹೆಚ್ಚು ಬೇಸರವಾಗುತ್ತಿರಲಿಲ್ಲ. ಆದರೆ ಇದು ಒಲಿಂಪಿಕ್ಸ್‌. ಇಲ್ಲಿ ಹೀಗೆ ಆದದ್ದು ದುಃಖದ ವಿಷಯ’ ಎಂದು ಅವರು ಹೇಳಿದರು.

‘ನಾನು ಇಲ್ಲಿ ತೋರಿದ ಪ್ರದರ್ಶನದಿಂದಾಗಿ ದೇಶದಲ್ಲಿ ಗಾಲ್ಫ್‌ಗೆ ನವಚೇತನ ಸಿಗುವ ನಿರೀಕ್ಷೆ ಇದೆ. ಒಲಿಂಪಿಕ್ಸ್‌ನಂಥ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂದು ಕನಸಿನಲ್ಲೂ ಎನಿಸಿರಲಿಲ್ಲ.

ಅಮೆರಿಕ ‘ಡಬಲ್’ ಸಾಧನೆ

ಕೊರ್ಡಾ ಅವರ ಸಾಧನೆಯಿಂದಾಗಿ ಅಮೆರಿಕ ಗಾಲ್ಫ್‌ನಲ್ಲಿ ‘ಡಬಲ್‌’ ಚಿನ್ನದ ಸಾಧನೆ ಮಾಡಿದಂತಾಯಿತು. ಕಳೆದ ವಾರ ನಡೆದ ಪುರುಷರ ಸ್ಪರ್ಧೆಯಲ್ಲಿ ವಿಶ್ವದ ನಾಲ್ಕನೇ ನಂಬರ್ ಆಟಗಾರ ಕ್ಸಾಂಡರ್ ಶಫೆಲಿ ಚಿನ್ನ ಗೆದ್ದಿದ್ದರು. ಕೊರ್ಡಾ ಅವರನ್ನುದ್ದೇಶಿಸಿ ಶುಕ್ರವಾರ ಟ್ವೀಟ್ ಮಾಡಿದ್ದ ಅವರು ’ದೇಶಕ್ಕೆ ಚಿನ್ನ ಗೆದ್ದು ತನ್ನಿ’ ಎಂದಿದ್ದರು.

ಪುರುಷರ ವಿಭಾಗದಲ್ಲಿ ಪದಕ ಗೆಲ್ಲಲು ವಿಫಲರಾದ ಹಿಡೆಕಿ ಮತ್ಸುಯಾಮ ಬಗ್ಗೆ ಜಪಾನ್‌ನಲ್ಲಿ ಭಾರಿ ರೋಷ ವ್ಯಕ್ತವಾಗಿತ್ತು. ಬೆಳ್ಳಿ ಗೆಲ್ಲುವ ಮೂಲಕ ಆ ಬೇಸರವನ್ನು ಇನಾಮಿ ನೀಗಿಸಿದರು. ನ್ಯೂಜಿಲೆಂಡ್‌ನ ಕೋ, ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಗಾಲ್ಫರ್ ಎನಿಸಿಕೊಂಡರು.

ಸ್ಪರ್ಧೆಯಲ್ಲಿ ಅಗ್ರ 5 ಸ್ಥಾನ ಗಳಿಸಿದವರು

ಗಾಲ್ಫರ್;ದೇಶ;1ನೇ ಸುತ್ತು;2ನೇ ಸುತ್ತು;3ನೇ ಸುತ್ತು;4ನೇ ಸುತ್ತು;ಒಟ್ಟು

ನೆಲ್ಲಿ ಕೊರ್ಡಾ;ಅಮೆರಿಕ;67;62;69;69;267

ಇನಾಮಿ ಮೊನೆ;ಜಪಾನ್;70;65;68;65;268

ಲಿಡಿಯಾ ಕೊ;ನ್ಯೂಜಿಲೆಂಡ್‌;70;67;66;65;268

ಅದಿತಿ ಅಶೋಕ್‌;ಭಾರತ;67;66;68;68;269

ಹನಾ ಗ್ರೀನ್‌;ಆಸ್ಟ್ರೇಲಿಯಾ;71;65;67;68;271

ಕ್ರಿಸ್ಟಿನ್ ಎಮಿಲಿ;ಡೆನ್ಮಾರ್ಕ್‌;70;63;70;68;271

ಕೊನೆಯ ಹಂತದಲ್ಲಿ ಗಾಬರಿಯಾಗಿದ್ದೆ. ಆದರೆ ಅಮೆರಿಕ ತಂಡದಲ್ಲಿದ್ದ ಸಹೋದರಿಯ ಜೊತೆ ಮಾತನಾಡುತ್ತ ನಿರಾಳವಾದೆ. ಇದರಿಂದ ಧೈರ್ಯ ಬಂತು. ನಂತರ ನಿರಾತಂಕವಾಗಿ ಆಡಿದೆ.

ನೆಲ್ಲಿ ಕೊರ್ಡಾ ಚಿನ್ನ ಗೆದ್ದ ಅಮೆರಿಕ ಗಾಲ್ಫರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.