ADVERTISEMENT

ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನಿಸ್: ಆರನೇ ಬಾರಿ ಕಿರೀಟ ಗೆದ್ದ ಸಂಜೀವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 16:24 IST
Last Updated 28 ಫೆಬ್ರುವರಿ 2024, 16:24 IST
ಸಂಜೀವ ಜಿ. ಹಮ್ಮಣ್ಣವರ
ಸಂಜೀವ ಜಿ. ಹಮ್ಮಣ್ಣವರ   

ಬೆಂಗಳೂರು: ಬೆಳಗಾವಿಯ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ ಜಿ. ಹಮ್ಮಣ್ಣವರ ಅವರು ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನಿಸ್ ರ್‍ಯಾಂಕಿಂಗ್‌ ಚಾಂಪಿಯನ್‍ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸತತ ಆರನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಲ್ಲದೆ, ಪುರುಷರ ಡಬಲ್ಸ್‌ನಲ್ಲೂ ಅವರು ಚಾಂಪಿಯನ್‌ ಕಿರೀಟ ಧರಿಸಿದರು.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಈಚೆಗೆ ನಡೆದ ಕೂಟದಲ್ಲಿ 53 ವರ್ಷದ ಸಂಜೀವ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಸಿಂಗಲ್ಸ್‌ನ ಎಂಎಸ್‌ 7 ವಿಭಾಗದ ಫೈನಲ್‌ ಸ್ಪರ್ಧೆಯಲ್ಲಿ ಸಂಜೀವ ಅವರು 12-10, 9-11, 7-11, 11-7, 12-10 ರಿಂದ ಉತ್ತರ ಪ್ರದೇಶದ 20 ವರ್ಷದ ಆಟಗಾರ ಯೋಗೇಶ್ ದಾಗರ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶದ ಹರ್ಷ್‌ ತ್ರಿವೇದಿ ಅವರನ್ನು ಹಿಮ್ಮೆಟ್ಟಿಸಿದ್ದರು.

ಉತ್ತರ ಪ್ರದೇಶದ ಶಿವಂ ಪಾಲ್‌ ಅವರ ಜತೆಗೂಡಿ ಡಬಲ್ಸ್‌ನಲ್ಲೂ ಸಂಜೀವ ಅವರು ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡರು. ಈ ಜೋಡಿಯು ಫೈನಲ್‌ನಲ್ಲಿ ಗುಜರಾತ್‌ನ ಯೆಜೆಡಿ ಮತ್ತು ಮಧ್ಯಪ್ರದೇಶದ ಗಜಾನನ ರೇವಣವರ್ ಅವರನ್ನು 11-7, 9-11, 11-6, 8-11, 11-7 ರಿಂದ ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಸಂಜೀವ ಅವರು ಬೆಳಗಾವಿ ಟೇಬಲ್‌ ಟೆನಿಸ್‌ ಅಕಾಡೆಮಿಯ ಸಂಗಮ್‌ ಬೈಲೂರು ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ಸಾಧನೆಗೆ ಅಡ್ಡಿಯಾಗದ ದೈಹಿಕ ನ್ಯೂನತೆ: ಬೆಳಗಾವಿ ತಾಲ್ಲೂಕಿನ ಬಸವನ ಕುಡಚಿ ನಿವಾಸಿಯಾಗಿರುವ ಸಂಜೀವ ಅವರು ಹುಟ್ಟಿನಿಂದಲೇ ಪೊಲಿಯೊ ಪೀಡಿತನಾಗಿ ಎಡಗಾಲಿನ ಸ್ವಾಧೀನ ಕಳೆದುಕೊಂಡು, ಶೇ 80ರಷ್ಟು ಅಂಗವಿಕಲತೆಗೆ ಒಳಗಾದರು. ಆದರೆ, ಅದು ಸಾಧನೆಗೆ ಅಡ್ಡಿಯಾಗಲಿಲ್ಲ. ದೈಹಿಕ ನ್ಯೂನತೆ ಇದ್ದರೂ ಕಾಲೇಜು ಹಂತದಲ್ಲೇ ವಾಲಿಬಾಲ್‌, ಚೆಸ್‌ ಮತ್ತು ಟೇಬಲ್‌ ಟೆನಿಸ್‌ ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ನಂತರದಲ್ಲಿ ಟೇಬಲ್‌ ಟೆನಿಸ್‌ ಕ್ರೀಡೆಯತ್ತ ವಿಶೇಷ ಗಮನ ಹರಿಸಿದ ಅವರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ಯಾರಾ ಕೂಟಗಳಲ್ಲಿ ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದಾರೆ.

ಬಿಇ ಪದವೀಧರರಾಗಿರುವ ಸಂಜೀವ ಅವರು 1994ರಲ್ಲಿ ಕೆಇಬಿನಲ್ಲಿ (ಪ್ರಸ್ತುತ ಹೆಸ್ಕಾಂ) ಉದ್ಯೋಗ ಪಡೆದರು. ವೃತ್ತಿ ಬದುಕಿನ ಜತೆಯಲ್ಲಿ ದಿನಕ್ಕೆ ಮೂರರಿಂದ ನಾಲ್ಕು ಗಂಟೆ ಟೇಬಲ್‌ ಟೆನಿಸ್‌ ಅಭ್ಯಾಸಕ್ಕೆ ಮೀಸಲಿಟ್ಟಿರುವ ಅವರು, ಆರನೇ ಬಾರಿ ರಾಷ್ಟ್ರೀಯ ಪ್ಯಾರಾ ಟಿಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಥಾಯ್ಲೆಂಡ್‌, ಸರ್ಬಿಯಾ, ಜೋರ್ಡಾನ್‌, ಸ್ಪೇನ್‌, ಫ್ರಾನ್ಸ್‌, ತೈವಾನ್‌, ಸ್ಲೊವೇನಿಯಾ ಮತ್ತು ಬ್ರೆಜಿಲ್‌ ಮುಂತಾದ ದೇಶಗಳಲ್ಲಿ ನಡೆದ ಪ್ಯಾರಾ ಕೂಟಗಳಲ್ಲಿ ಪಾಲ್ಗೊಂಡಿರುವ ಸಂಜೀವ ಅವರು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಒಂದು ಚಿನ್ನ ಮತ್ತು ಮೂರು ಬೆಳ್ಳಿ ಗೆದ್ದಿದ್ದಾರೆ. ಪ್ರಸ್ತುತ ಅವರು ಪ್ಯಾರಾ ಟಿಟಿ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿದ್ದರೆ, ವಿಶ್ವ ರ‍್ಯಾಂಕಿಂಗ್‌ನಲ್ಲಿ 61ನೇ ಸ್ಥಾನ ಗಳಿಸಿದ್ದಾರೆ.

‘ಚೆಸ್‌ ಮತ್ತು ಟೇಬಲ್‌ ಟೆನಿಸ್‌ ಅಂದರೆ ನನಗೆ ಪಂಚಪ್ರಾಣ. ಈ ಎರಡು ಕ್ರೀಡೆಗಳು ದೈಹಿಕ ಶ್ರಮಕ್ಕಿಂತ ಬುದ್ಧಿಗೆ ಕೆಲಸ ನೀಡುತ್ತದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಟೇಬಲ್‌ ಟೆನಿಸ್‌ ಅಭ್ಯಾಸ ಮಾಡುತ್ತೇನೆ. ಹೀಗಾಗಿ, ಈ ವಯಸ್ಸಿನಲ್ಲೂ ರಾಷ್ಟ್ರೀಯ ಚಾಂಪಿಯನ್‌ ಆಗಲು ಸಾಧ್ಯವಾಗಿದೆ. ಸಾಧನೆಗೆ ಛಲ ಮತ್ತು ಪರಿಶ್ರಮ ಮುಖ್ಯ’ ಎನ್ನುತ್ತಾರೆ ಸಂಜೀವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.