ADVERTISEMENT

ಗ್ರಾಮೀಣ ಪ್ರತಿಭೆಗೆ ಒಲಿದ ‘ಕ್ರೀಡಾರತ್ನ’

ಅಂತರರಾಷ್ಟ್ರೀಯ ಮಟ್ಟದ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಮಿಂಚಿದ ಮಹೇಶ ಏರಿಮನಿ

ಸಿದ್ದು ಆರ್.ಜಿ.ಹಳ್ಳಿ
Published 3 ನವೆಂಬರ್ 2020, 15:45 IST
Last Updated 3 ನವೆಂಬರ್ 2020, 15:45 IST
‘ಕ್ರೀಡಾರತ್ನ’ ಪ್ರಶಸ್ತಿ ಪುರಸ್ಕೃತ ಮಹೇಶ ಏರಿಮನಿ 
‘ಕ್ರೀಡಾರತ್ನ’ ಪ್ರಶಸ್ತಿ ಪುರಸ್ಕೃತ ಮಹೇಶ ಏರಿಮನಿ    

ಹಾವೇರಿ: ಭಾರತದ ಸಾಂಪ್ರದಾಯಿಕ ಕ್ರೀಡೆಯಾದ ‘ಅಟ್ಯಾಪಟ್ಯಾ’ದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ ಮಹೇಶ ಆರ್‌. ಏರಿಮನಿ ಅವರಿಗೆ ‘ಕರ್ನಾಟಕ ಕ್ರೀಡಾರತ್ನ–2017’ ಪ್ರಶಸ್ತಿ ಸಂದಿರುವುದು ಜಿಲ್ಲೆಯ ಜನರಿಗೆ ಹೆಮ್ಮೆ ಮತ್ತು ಸಂತಸ ತಂದಿದೆ.

ಸವಣೂರು ತಾಲ್ಲೂಕಿನ ಹರಳಿಕುಪ್ಪೆ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಮಹೇಶ ಏರಿಮನಿ ಅವರು ಹೆಸರಿಗೆ ತಕ್ಕಂತೆ ಸಾಧನೆಯ ಶಿಖರ ಏರಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಮಿನುಗುವ ಕ್ರೀಡಾ ತಾರೆ’ಯಾಗಿದ್ದಾರೆ.

ರೈತ ರಮೇಶಪ್ಪ ಮತ್ತು ಪುಟ್ಟವ್ವ ದಂಪತಿಯ ಪುತ್ರನಾದ ಮಹೇಶ ಅವರು ಸ್ವ ಗ್ರಾಮದಲ್ಲೇ 4ನೇ ತರಗತಿವರೆಗೂ ವ್ಯಾಸಂಗ ಮಾಡಿದರು. ನಂತರ ಧಾರವಾಡದ ಪಬ್ಲಿಕ್‌ ಶಾಲೆಯಲ್ಲಿ 5ನೇ ತರಗತಿಯಿಂದ ವ್ಯಾಸಂಗ ಮುಂದುವರಿಸಿ, ಕರ್ನಾಟಕ ಕಾಲೇಜು ಧಾರವಾಡದಲ್ಲಿ (ಕೆಸಿಡಿ) ಬಿ.ಎ. ಪದವಿ ಪಡೆದಿದ್ದಾರೆ. ಬಿಪಿಇಡಿ ಕೋರ್ಸ್ ಮಾಡಿ ಉತ್ತಮ ಕ್ರೀಡಾ ತರಬೇತುದಾರ ಆಗಬೇಕು ಎಂಬ ಕನಸು ಹೊತ್ತಿದ್ದಾರೆ.

ADVERTISEMENT

ಅಟ್ಯಾಪಟ್ಯಾದ ನಂಟು:‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮಹೇಶ ಅವರು 5ನೇ ತರಗತಿಯಿಂದಲೇ ಅಟ್ಯಾಪಟ್ಯಾ ಕ್ರೀಡಾಭ್ಯಾಸವನ್ನು ಆರಂಭಿಸಿದರು. ಇವರ ಕ್ರೀಡಾ ಕೌಶಲ, ಪರಿಶ್ರಮ, ಶ್ರದ್ಧೆಯನ್ನು ಗುರುತಿಸಿದ ದೈಹಿಕ ಶಿಕ್ಷಣ ಶಿಕ್ಷಕ ಡಾ.ವೀರನಗೌಡ ಡಿ.ಪಾಟೀಲ ಅವರು ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹದ ನೀರೆರೆದರು.

ಪಾಟೀಲರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಮಹೇಶ ಅವರು ಅನೇಕ ಎಡರು ತೊಡರುಗಳನ್ನು ದಾಟಿ, ಅಂತರಶಾಲಾ– ಜಿಲ್ಲಾಮಟ್ಟದಿಂದ ಒಂದೊಂದೇ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ರಾಷ್ಟ್ರೀಯ– ಅಂತರರಾಷ್ಟ್ರೀಯ ಮಟ್ಟದವರೆಗೆ ತಮ್ಮ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇವರು ಬಾಲ್‌ಬ್ಯಾಡ್ಮಿಂಟನ್‌, ವಾಲಿಬಾಲ್‌ ಹಾಗೂ ಕೊಕ್ಕೊ ಕ್ರೀಡೆಗಳಲ್ಲೂ ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಮಿಂಚು ಹರಿಸಿದ್ದಾರೆ.

ಗುರುಗಳ ಕೃಪೆ:‘ಬಡ ಕುಟುಂಬದಲ್ಲಿ ಬೆಳೆದ ನಾನು ಇಂದು ಕ್ರೀಡಾರತ್ನ ಪ್ರಶಸ್ತಿಗೆ ಅರ್ಹನಾಗಿದ್ದೇನೆ ಎಂದರೆ, ಅದಕ್ಕೆ ನನ್ನ ತಂದೆ–ತಾಯಿಯ ಪ್ರೋತ್ಸಾಹ ಹಾಗೂ ಗುರುಗಳಾದ ಡಾ.ವೀರನಗೌಡ ಡಿ.ಪಾಟೀಲ ಅವರ ತರಬೇತಿ, ಪ್ರೋತ್ಸಾಹವೇ ಕಾರಣ. ಎಷ್ಟೋ ಬಾರಿ ಹಣವಿಲ್ಲದಿದ್ದಾಗ ಗುರುಗಳೇ ಹಣ ನೀಡಿ ಸ್ಪರ್ಧೆಗೆ ಕಳುಹಿಸಿದ್ದಾರೆ. ನನ್ನ ಜೀವನ ರೂಪಿಸಿದ ಗುರುಗಳ ಋಣವನ್ನು ತೀರಿಸಲು ಸಾಧ್ಯವಿಲ್ಲ’ ಎಂದು ಭಾವುಕರಾಗಿ ನುಡಿದರು ಮಹೇಶ್‌.

ಓದಿಗೆ ತೊಡಕಾಗಲಿಲ್ಲ:‘ಆಟ–ಪಾಠ ಎರಡಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ನಮ್ಮ ಗುರುಗಳು ಮಾರ್ಗದರ್ಶನ ಮಾಡಿದರು. ಹೀಗಾಗಿ ಅಟ್ಯಾಪಟ್ಯಾ ಕ್ರೀಡೆ ಎಂದಿಗೂ ನನ್ನ ಓದಿಗೆ ತೊಡಕುಂಟು ಮಾಡಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಶೇ 71, ಪಿಯುಸಿಯಲ್ಲಿ ಶೇ 63 ಹಾಗೂ ಪದವಿಯಲ್ಲಿ ಶೇ 76 ಫಲಿತಾಂಶ ಪಡೆದಿದ್ದೇನೆ. ನಾನು ಕಲಿತ ಕ್ರೀಡಾ ವಿದ್ಯೆಯನ್ನು ಬಡ ಮಕ್ಕಳಿಗೆ ಧಾರೆ ಎರೆಯಬೇಕು. ನನ್ನ ಕೈಲಾದಷ್ಟು ಸಹಾಯ ಮಾಡಬೇಕು’ ಎಂಬ ಕನಸಿದೆ ಎಂದು ಮಹೇಶ್ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಸಾಧನೆಯ ಶಿಖರ ಏರಿದ ‘ಏರಿಮನಿ’

2015ರಲ್ಲಿ ಕೇರಳದಲ್ಲಿ ನಡೆದ 28ನೇ ಕಿರಿಯರ ಅಟ್ಯಾಪಟ್ಯಾ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಹಾಗೂ2017ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 2ನೇ ಅಟ್ಯಾಪಟ್ಯಾ ಫೆಡರೇಷನ್‌ ಕಪ್‌ ಪಂದ್ಯಾವಳಿಯಲ್ಲಿ ಮಹೇಶ ಏರಿಮನಿ ಅವರು ಚಿನ್ನದ ಪದಕ ಪಡೆದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಸಾಧನೆ: 2017 ಜನವರಿಯಲ್ಲಿ ಭೂತಾನ್‌ನಲ್ಲಿ ನಡೆದ 3ನೇ ಸೌತ್‌ ಏಷ್ಯನ್‌‌ ಅಟ್ಯಾಪಟ್ಯಾ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

‘ಒಲಿಂಪಿಕ್ಸ್‌ನಲ್ಲೂ ಮಾನ್ಯತೆ ದೊರೆಯಲಿ‌’

‘ಪರಿಶ್ರಮ, ಶ್ರದ್ಧೆ, ಕೌಶಲದ ಸಂಗಮವಾಗಿರುವ ಮಹೇಶ ಉತ್ತಮ ಕ್ರೀಡಾಪಟು. ಆತನಿಗೆ ‘ಕ್ರೀಡಾರತ್ನ’ ಪ್ರಶಸ್ತಿ ಸಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಆತನಿಗೆ ಒಳ್ಳೆಯ ಭವಿಷ್ಯವಿದೆ’ ಎನ್ನುತ್ತಾರೆ ತರಬೇತುದಾರ ಹಾಗೂ ‘ಅಟ್ಯಾಪಟ್ಯಾ ಫೆಡರೇಷನ್‌ ಆಫ್‌ ಇಂಡಿಯಾ’ದ ಅಧ್ಯಕ್ಷ ಡಾ.ವೀರನಗೌಡ ಡಿ.ಪಾಟೀಲ.

‘ಅಟ್ಯಾಪಟ್ಯಾ ಕ್ರೀಡೆಗೆ ಸೌತ್‌ ಏಷ್ಯನ್‌ ಗೇಮ್ಸ್‌ನಲ್ಲಿ ಮಾನ್ಯತೆ ದೊರಕಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಮಾನ್ಯತೆ ದೊರಕಿಸಲು ಪ್ರಯತ್ನ ನಡೆಯುತ್ತಿದೆ. ನಂತರ ಒಲಿಂಪಿಕ್ಸ್‌ನಲ್ಲೂ ಈ ಕ್ರೀಡೆಗೆ ಅವಕಾಶ ಸಿಗಬೇಕು ಎಂಬುದು ನಮ್ಮ ಒತ್ತಾಸೆ. ಸರ್ಕಾರ ಮತ್ತಷ್ಟು ಪ್ರೋತ್ಸಾಹ ಮತ್ತು ಅನುದಾನ ನೀಡಿದರೆ ಈ ಗ್ರಾಮೀಣ ಕ್ರೀಡೆಗೆ ಉಜ್ವಲ ಭವಿಷ್ಯ ಸಿಗುತ್ತದೆ ಎಂಬುದು ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.