ಬೆಂಗಳೂರು: ಆರ್.ಎಸ್. ಜೆಲ್ಸಿಸ್ (60ನೇ ನಿ.) ಹಾಗೂ ಮೋಹಕ್ ಮುತ್ತಲಮನಿ (82ನೇ ನಿ.) ಅವರ ಗೋಲಿನ ನೆರವಿನಿಂದ ಬೆಂಗಳೂರು ಸಿಟಿ ಫುಟ್‌ಬಾಲ್ ಕ್ಲಬ್ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–0ಯಿಂದ ಭಾರತ್ ಬೆಂಗಳೂರು ಎಫ್‌ಸಿ ತಂಡವನ್ನು ಸೋಲಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳಿಗೆ ಮೊದಲಾರ್ಧದಲ್ಲಿ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. ದ್ವಿತೀಯಾರ್ಧದಲ್ಲಿ ಲಯ ಕಂಡುಕೊಂಡ ಬೆಂಗಳೂರು ಸಿಟಿ ಎಫ್‌ಸಿ ತಂಡದ ಜೆಲ್ಸಿಸ್ ಹಾಗೂ ಮೋಹಕ್ ತಲಾ ಒಂದು ಗೋಲು ಹೊಡೆದು ಗೆಲುವಿನ ರೂವಾರಿಗಳಾದರು.
ಮತ್ತೊಂದು ಪಂದ್ಯದಲ್ಲಿ ಎಫ್‌ಸಿ ರಿಯಲ್ ಬೆಂಗಳೂರು ತಂಡವು 1–0ಯಿಂದ ಎಂಎಫ್‌ಎಆರ್ ಸ್ಟುಡೆಂಟ್ಸ್ ಯೂನಿಯನ್ ತಂಡವನ್ನು ಮಣಿಸಿತು. ರಿಯಲ್ ಬೆಂಗಳೂರು ತಂಡದ ಗೈಥಲಾಂಗ್ ರೊಂಗಮೈ (89ನೇ ನಿ.) ಅವರು ಅಂತಿಮ ಕ್ಷಣದಲ್ಲಿ ಗೆಲುವಿನ ಗೋಲು ಹೊಡೆದರು.
ಇನ್ನೊಂದು ಪಂದ್ಯದಲ್ಲಿ ಎಎಸ್‌ಸಿ ಆ್ಯಂಡ್ ಸೆಂಟರ್ ಎಫ್‌ಸಿ ತಂಡವು 3–0ಯಿಂದ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ತಂಡದ ವಿರುದ್ಧ ಜಯ ಸಾಧಿಸಿತು. ಎಎಸ್‌ಸಿ ತಂಡದ ಮೈಶಫಂಗ್ ನೆಂಗ್ ನಾಂಗ್ (20ನೇ ನಿ.), ಟಿ. ಕೃಷ್ಣ ಕಾಂತ ಸಿಂಗ್ (54ನೇ ನಿ.) ಹಾಗೂ ಒ. ಗೌತಮ್ ಸಿಂಗ್ (65ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.