ADVERTISEMENT

ಕುಟುಂಬದ ಹಾದಿಯಲ್ಲೇ ಸಾಗಿದ 'ಕುಶ'ಲಮತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 19:30 IST
Last Updated 23 ಸೆಪ್ಟೆಂಬರ್ 2020, 19:30 IST
ಕುಶ ಮೈನಿ
ಕುಶ ಮೈನಿ   

ಕುಟುಂಬದ ಇತರರ ಹಾದಿಯಲ್ಲಿ ಸಾಗಲು ಇಷ್ಟಪಡದೆ ಸ್ವಂತಿಕೆ ಮೆರೆಯಲು ಪ್ರಯತ್ನಿಸುವುದುಹೊಸ ತಲೆಮಾರಿನ ಟ್ರೆಂಡ್. ಆದರೆ ಬೆಂಗಳೂರಿನ ಕುಶ, ತಂದೆ ಮತ್ತು ಸಹೋದರ ಸಾಧನೆ ಮಾಡಿದ ಮೋಟರ್ ರೇಸಿಂಗ್‌ನ ದಾರಿಯನ್ನೇ ಹಿಡಿದವರು. ಅವರು ಯುರೋಪಿಯನ್ ರೇಸಿಂಗ್‌ನಲ್ಲಿ ಮಿಂಚುತ್ತಿದ್ದಾರೆ

ತಂದೆ‌ ಗೌತಮ್ ಮೈನಿ ಫಾರ್ಮುಲಾ–3 ರೇಸರ್. 1990ರ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಚಾಲಕ. ತಂದೆಯ ಸಾಧನೆಯಿಂದ ಪ್ರೇರಣೆಗೊಂಡು ಮೋಟರ್ ರೇಸಿಂಗ್ ಕ್ಷೇತ್ರಕ್ಕೆ ಧುಮುಕಿದ ಸಹೋದರ ಅರ್ಜುನ್ ಮೈನಿ 2008ರಲ್ಲಿ ಮಲೇಷ್ಯನ್ ರಾಯಲ್ ಕೆಲಾಟನ್ ಕಾರ್ಟ್ ಪ್ರಿಕ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಕಾರ್ಟ್ ರೇಸ್‌ನಲ್ಲಿ ಈ ಸಾಧನೆ ಮಾಡಿದ ಭಾರತ ಅತಿ ಕಿರಿಯ ಚಾಲಕ ಎಂಬ ಹೆಸರು ಗಳಿಸಿದವರು. ಮಾವ ಚೇತನ್ ಮೈನಿ ಇಲೆಕ್ಟ್ರಿಕ್ ಕಾರು ತಯಾರಿಯಲ್ಲಿ ಹೆಸರು ಮಾಡಿದವರು.

ಹೀಗೆ ರೇಸ್ ಮತ್ತು ಕಾರುಗಳ ಹೆಸರನ್ನು ಕೇಳುತ್ತ, ರೋಮಾಂಚಕ ಸ್ಪರ್ಧೆಗಳನ್ನು ನೋಡುತ್ತ ಬೆಳೆದ ಬೆಂಗಳೂರಿನ ಕುಶ ಮೈನಿ ಕುಟುಂಬದ ಹಾದಿಯಲ್ಲೇ ಸಾಗಿ ಸಾಧನೆಯ ಉತ್ತುಂಗದತ್ತ ಹೆಜ್ಜೆ ಹಾಕಿದ್ದಾರೆ. ಯುರೋಪಿಯನ್‌ ಗ್ರಾನ್‌ ಪ್ರಿಗಳಲ್ಲಿ ಈಚಿನ ವರ್ಷಗಳಲ್ಲಿ ಹೆಸರು ಮಾಡುತ್ತಿರುವ ಅವರು ಅಣ್ಣ ದಾಖಲೆ ಬರೆದ ಮಲೇಷ್ಯಾದಲ್ಲೇ ಭಾರತಕ್ಕೆ ಮತ್ತೊಂದು ದಾಖಲೆ ತಂದುಕೊಟ್ಟವರು. 2010ರಲ್ಲಿ ಯಮಹಾ ಎಸ್‌ಎಲ್‌ ಕಪ್‌ನಲ್ಲಿ ಚಾಂಪಿಯನ್ ಆಗಿ ಈ ಸಾಧನೆ ಮಾಡಿದ ಅತಿಕಿರಿಯ ಎಂದೆನಿಸಿಕೊಂಡವರು. ಈಗ, ಲೇಸಸ್ಟರ್‌ಶೈರ್‌ನಲ್ಲಿ ನಡೆದ ಬ್ರಿಟಿಷ್ ಫಾರ್ಮುಲಾ–3 ಚಾಂಪಿಯನ್‌ಷಿಪ್‌ನ ಮೂರನೇ ರೇಸ್‌ನಲ್ಲಿ ಗೆದ್ದು ಮಿಂಚಿದ್ದಾರೆ. ಇದು ಈ ವರ್ಷದಲ್ಲಿ ಅವರ ಎರಡನೇ ಗೆಲುವು.

ADVERTISEMENT

ಕುಟುಂಬದ ಇತರರ ಹಾದಿಯಲ್ಲಿ ಸಾಗಲು ಇಷ್ಟಪಡದೆ ಸ್ವಂತಿಕೆ ಮೆರೆಯಲು ಪ್ರಯತ್ನಿಸುವುದುಹೊಸ ತಲೆಮಾರಿನ ಟ್ರೆಂಡ್. ಆದರೆ ಖುಷ್ ಮಾತ್ರ ತಂದೆ ಮತ್ತು ಸಹೋದರನ ಕ್ಷೇತ್ರವಾದ ಮೋಟರ್ ರೇಸಿಂಗ್‌ನಲ್ಲೇ ಸಾಧನೆ ಮಾಡಲು ಬಯಸಿದವರು. ತಂದೆಯ ಒಂಟಿ ಆಸನದ ಮೋಟರ್ ರೇಸ್‌ ನೋಡಲು ಹೋಗುತ್ತಿದ್ದ ಖುಷ್‌ ಸಹೋದರನೊಂದಿಗೆ ಕಾರ್ಟಿಂಗ್‌ನಲ್ಲಿ ಮೋಜು ಮಾಡುತ್ತ ಬೆಳೆದವರು. 2007ರಲ್ಲಿ, ಏಳನೇ ವಯಸ್ಸಿನಲ್ಲೇ ಕಾರ್ಟಿಂಗ್ ಮೂಲಕ ರೇಸಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವರಿಗೆ ಈಗ 18 ವರ್ಷ. ‌

2011ರಲ್ಲಿ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನ ಮೈಕ್ರೊಮ್ಯಾಕ್ಸ್ ವಿಭಾಗದಲ್ಲಿ ಎಲ್ಲ ಆರು ಸುತ್ತುಗಳಲ್ಲೂ ಪಾರಮ್ಯ ಮೆರೆದು ಪ್ರಶಸ್ತಿ ಗೆದ್ದರು. ಎರಡು ವರ್ಷಗಳ ನಂತರ ನಡೆದ ಜೂನಿಯರ್ ಮೈಕ್ರೊಮ್ಯಾಕ್ಸ್‌ ವಿಭಾಗದಲ್ಲಿ ರನ್ನರ್ ಅಪ್‌ ಆದ ಅವರು ನಂತರ ಯುರೋಪಿಯನ್ ಕಾರ್ಟಿಂಗ್ ಸರ್ಕೀಟ್‌ನತ್ತ ಚಿತ್ತ ನೆಟ್ಟರು. ವಿಶ್ವ ಕಾರ್ಟಿಂಗ್ ಸೀರಿಸ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದರು. 2012ರ ಯೂರೊ ಸೀರಿಸ್‌ನಲ್ಲಿ ಎರಡನೇ ಸ್ಥಾನ ಗಳಿಸಿ ಮುಂದಿನ ವರ್ಷ ಮಾಸ್ಟರ್ಸ್ ವಿಭಾಗದಲ್ಲಿ ಮೂರನೆಯವರಾದರು. 2014ರಲ್ಲಿ ಮತ್ತೊಂದು ಮಹತ್ವದ ಗರಿ ಅವರ ಮುಡಿಗೇರಿತು. ಸಿಐಕೆ–ಫಿಯಾ ವಿಶ್ವ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸುವುದರೊಂದಿಗೆ ಈ ಸಾಧನೆ ಮಾಡಿದ ಭಾರತದ ಅತಿ ಕಿರಿಯ ಚಾಲಕ ಎಂದೆನಿಸಿಕೊಂಡರು.

2105ರಲ್ಲಿ ಟ್ರೊಫೊ ಆ್ಯಂಡ್ರೆ ಮರ್ಗುತಿಯಲ್ಲಿ ಚಾಂಪಿಯನ್‌‍‍ಪಟ್ಟ ಅಲಂಕರಿಸಿದ ಖುಷ್ ಗೋಲ್ಡ್ ಕಪ್‌ನಲ್ಲಿ ರನ್ನರ್ ಅಪ್ ಆದರು. ಚಾಂಪಿಯನ್ಸ್‌ ಕ್ಲಬ್‌ನಲ್ಲಿ ನಾಲ್ಕನೇ ಸ್ಥಾನ ಹಾಗೂ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತನೇ ಸ್ಥಾನ ಅವರದಾಯಿತು. ಅದೇ ವರ್ಷ ಒಂಟಿ ಆಸನದ ಫಾರ್ಮುಲಾ ಮೋಟರ್ ಕ್ರೀಡೆ‌ಗೆ ಪದಾರ್ಪಣೆ ಮಾಡಿದರು. ಫಾರ್ಮುಲಾ ಮೋಟರ್ ಸ್ಪರ್ಧೆಯ ಎರಡನೇ ಸುತ್ತಿನಲ್ಲಿ ಚೊಚ್ಚಲ ಅಗ್ರ ಸ್ಥಾನವೂ ಆ ವರ್ಷ ಅವರ ಮುಡಿಗೇರಿತು. 2016ರಲ್ಲಿ ಇಟಾಲಿಯನ್ ಫಾರ್ಮುಲಾ–4 ಚಾಂಪಿಯನ್‌ಷಿಪ್‌ನಲ್ಲಿ ಬಿವಿಎಂ ರೇಸಿಂಗ್ ತಂಡದೊಂದಿಗೆ ಪಾಲ್ಗೊಂಡ ಅವರು ಯುರೋಪಿಯನ್ ಓಪನ್ ವ್ಹೀಲ್ ರೇಸಿಂಗ್‌ಗೂ ಕಾಲೂರಿದರು. ಅಲ್ಲಿ 16ನೇ ಸ್ಥಾನ ಗಳಿಸಿ ಗಮನ ಸೆಳೆದರು. 2017ರಲ್ಲಿ ಸ್ವಲ್ಪ ಏರಿಳಿತ ಕಂಡರೂ ನಂತರ ಚೇತರಿಸಿಕೊಂಡರು.

ಕುಶ ಅವರ ಸಹೋದರ ಅರ್ಜುನ್ ಜಿಪಿ–3 ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ‘ನನ್ನ ಮತ್ತು ಕುಶನ ಚಾಲನೆಯ ರೀತಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಆತನಿಗೆ ಆತನದೇ ವಿಧಾನವಿದೆ. ಅದರಲ್ಲಿ ಸಾಕಷ್ಟು ಪಳಗಿದ್ದಾನೆ’ ಎಂದು ಹೇಳುತ್ತಾರೆ ಅರ್ಜುನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.