ಪ್ಯಾರಿಸ್ (ಪಿಟಿಐ): ಒಲಿಂಪಿಕ್ಸ್‌ನಲ್ಲಿ ಪದಕ ಜಯದ ಭರವಸೆ ಮೂಡಿಸಿರುವ ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿಯು ಶನಿವಾರ ಇಲ್ಲಿ ನಡೆದ ಪುರುಷರ ಡಬಲ್ಸ್‌ನಲ್ಲಿ ಶುಭಾರಂಭ ಮಾಡಿತು. ಸಿಂಗಲ್ಸ್‌ನಲ್ಲಿಯೂ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲಿ ಗೆದ್ದು ಮುನ್ನಡೆದರು.
ಏಷ್ಯನ್ ಗೇಮ್ಸ್ ಚಾಂಪಿಯನ್ ಜೋಡಿ ಸಾತ್ವಿಕ್-ಚಿರಾಗ್ ಸಿ ಗುಂಪಿನ ಪಂದ್ಯದಲ್ಲಿ 21-17 21-14 ರಿಂದ ಆತಿಥೇಯ ಫ್ರಾನ್ಸ್ ಜೋಡಿ ಲೂಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್ ವಿರುದ್ಧ ಗೆದ್ದರು. ಸೋಮವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಭಾರತದ ಜೋಡಿಯು ಜರ್ಮನಿಯ ಮಾರ್ಕ್ ಲ್ಯಾಮ್ಸ್‌ಫಸ್ ಮತ್ತು ಮಾರ್ವಿನ್ ಸೀಡೆಲ್ ಅವರನ್ನು ಎದುರಿಸಲಿದ್ದಾರೆ.
ಮೂರನೇ ಶ್ರೇಯಾಂಕದ ಸಾತ್ವಿಕ್ –ಚಿರಾಗ್ ಅವರಿಗೆ ಮೊದಲ ಗೇಮ್‌ನಲ್ಲಿ ತುಸು ಕಠಿಣ ಪೈಪೋಟಿ ಎದುರಾಯಿತು. ಆದರೆ ತಮ್ಮ ಹೊಂದಾಣಿಕೆಯ ಆಟ ಮತ್ತು ಚುರುಕಿನ ತಂತ್ರಗಾರಿಕೆ ಮೂಲಕ ಎದುರಾಳಿಗಳನ್ನು ಮಣಿಸಿದರು. ಎರಡನೇ ಗೇಮ್‌ನಲ್ಲಿಯೂ ಪಾರಮ್ಯ ಮೆರೆದರು.
ಸೇನ್‌ಗೆ ಮೊದಲ ಗೆಲುವು: ತಮ್ಮ ಕ್ರೀಡಾಜೀವನದ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಆಡುತ್ತಿರು ಲಕ್ಷ್ಯ ಸೇನ್ ಅವರು ಸಿಂಗಲ್ಸ್ ವಿಭಾಗದ ಎ ಗುಂಪಿನ ಪಂದ್ಯದಲ್ಲಿ ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು.
22ರ ಹರೆಯದ ಸೇನ್ ಅವರು 42 ನಿಮಿಷಗಳ ಪಂದ್ಯದಲ್ಲಿ 21-8, 22-20ರ ಅಂತರದಲ್ಲಿ ಕಾರ್ಡನ್ ವಿರುದ್ಧ ಗೆದ್ದರು.
ಕುತೂಹಲ ಕೆರಳಿಸಿದ್ದ ಎರಡನೇ ಗೇಮ್‌ನಲ್ಲಿ ಕಾರ್ಡನ್ ತೀವ್ರ ಪೈಪೋಟಿ ಒಡ್ಡಿದರು. 20–20ರವರೆಗೂ ಸಮಬಲದ ಹೋರಾಟ ನಡೆಯಿತು. ಆದರೆ ಛಲಬಿಡದ ಲಕ್ಸ್ಯ ವಿಜೇತರಾದರು.
ಸೋಮವಾರ ನಡೆಯಲಿರುವ ಗುಂಪಿನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.