ಬ್ಯಾಂಕಾಕ್: ಭಾರತದ ಅನುಭವಿ ಆಟಗಾರ ಲಕ್ಷ್ಯ ಸೇನ್, ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದರಯು. ಆದರೆ ಉದಯೋನ್ಮುಖ ಆಟಗಾರ್ತಿಯರಾದ ಆಕರ್ಷಿ ಕಶ್ಯಪ್ ಮತ್ತು ಉನ್ನತಿ ಹೂಡಾ ಅವರು ಬುಧವಾರ ತೀವ್ರ ಹೋರಾಟದ ಪಂದ್ಯಗಳನ್ನು ಗೆದ್ದು ಮಹಿಳೆಯರ ಸಿಂಗಲ್ಸ್ ಎರಡನೆ ಸುತ್ತಿಗೆ ತಲುಪಿದರು.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸೇನ್ ಮೂರು ಗೇಮ್‌ಗಳ ಸೆಣಸಾಟದಲ್ಲಿ ಐರ್ಲೆಂಡ್‌ನ ಹಾತ್ ನೂಯೆನ್ ಅವರಿಗೆ 18–21, 21–9, 17–21 ರಲ್ಲಿ ಮಣಿದರು. ಒಟ್ಟು 80 ನಿಮಿಷಗಳವರೆಗೆ ನಡೆದ ಈ ಪಂದ್ಯದ ಮೊದಲ ಗೇಮ್‌ನಲ್ಲಿ ಸೇನ್ ಸೋತರೂ, ಆಕ್ರಮಣಕಾರಿ ರ‍್ಯಾಲಿಗಳ ಮೂಲಕ ಎರಡನೇ ಗೇಮ್ ಅನ್ನು ಸುಲಭವಾಗಿ ಪಡೆದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಗುಯೆನ್ ಮೇಲುಗೈ ಸಾಧಿಸಿದರು.
ಪ್ರಿಯಾಂಶು ರಾಜಾವತ್ ಅವರ ಸವಾಲೂ ಬೇಗನೇ ಅಂತ್ಯಕಂಡಿತು. ಅವರು 13–21, 21–17, 16–21 ರಲ್ಲಿ ಇಂಡೊನೇಷ್ಯಾದ ಅಲಿ ಪರ್ಹಾನ್ ಅವರಿಗೆ ಸೋತರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ರೋಚಕ ಸೆಣಸಾಟದಲ್ಲಿ ಜಪಾನ್ ಕವೊರು ಸುಗಿಯಾಮಾ ಅವರನ್ನು 21–16, 20–22 22–20 ರಿಂದ ಸೋಲಿಸಿದರು. ಉನ್ನತಿ ಕೂಡ ಮೂರು ಗೇಮ್‌ಗಳವರೆಗೆ ಬೆಳೆದ ಪಂದ್ಯದಲ್ಲಿ ಥಾಯ್ಲೆಂಡ್‌ನ ತಮೊನವಾನ್ ಅವರನ್ನು ಹಿಮ್ಮೆಟ್ಟಿಸಿದರು.
ಆದರೆ ರಕ್ಷಿತಾಶ್ರೀ ಸಂತೋಷ್ ರಾಮರಾಜ್ ಮೊದಲ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಯೊ ಜಿಯಾ ಮಿನ್ (ಸಿಂಗಪುರ) ಅವರಿಗೆ 18–21, 7–21 ರಲ್ಲಿ ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.