ADVERTISEMENT

ಬ್ಯಾಡ್ಮಿಂಟನ್: ಕ್ರಿಸ್ಟಿಗೆ ಆಘಾತ ನೀಡಿದ ಲಕ್ಷ್ಯ ಎಂಟರ ಘಟ್ಟಕ್ಕೆ

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್: ಮಾಳವಿಕಾ ನಿರ್ಗಮನ

ಪಿಟಿಐ
Published 13 ಮಾರ್ಚ್ 2025, 16:13 IST
Last Updated 13 ಮಾರ್ಚ್ 2025, 16:13 IST
<div class="paragraphs"><p>ಲಕ್ಷ್ಯ ಸೇನ್ </p></div>

ಲಕ್ಷ್ಯ ಸೇನ್

   

ಪಿಟಿಐ

ಬರ್ಮಿಂಗ್‌ಹ್ಯಾಮ್: ಅತ್ಯುತ್ಕೃಷ್ಟ ಆಟವಾಡಿದ ಭಾರತದ ಲಕ್ಷ್ಯ ಸೇನ್‌, ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಜೊನಾಥನ್ ಕ್ರಿಸ್ಟಿ ಅವರಿಗೆ ನೇರ ಆಟಗಳಿಂದ ಆಘಾತ ನೀಡಿ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ಸ್‌ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ADVERTISEMENT

23 ವರ್ಷ ವಯಸ್ಸಿನ ಲಕ್ಷ್ಯ ಗುರುವಾರ ನಡೆದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 21–13, 21–10 ರಿಂದ ಇಂಡೊನೇಷ್ಯಾದ ಪ್ರಬಲ ಆಟಗಾರನನ್ನು ಸೋಲಿಸಿದರು. ಪಂದ್ಯ ನಿರೀಕ್ಷೆ ಮೀರಿ ಏಕಪಕ್ಷೀಯವಾಯಿತು. ಅಲ್ಮೋರಾದ ಆಟಗಾರ ಗೆಲುವಿಗೆ ತೆಗೆದುಕೊಂಡ ಅವಧಿ 36 ನಿಮಿಷಗಳನ್ನಷ್ಟೇ.

ಕ್ರಿಸ್ಟಿ ವಿರುದ್ಧ ಆಡಿದ ಏಳು ಪಂದ್ಯಗಳಲ್ಲಿ ಲಕ್ಷ್ಯ ಗಳಿಸಿದ ಮೂರನೇ ಜಯ ಇದು. ಕಳೆದ ವರ್ಷದ ಮಧ್ಯದಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ ನಂತರ ಇವರಿಬ್ಬರು ಇದೇ ಮೊದಲ ಬಾರಿ ಮುಖಾಮುಖಿಯಾಗಿದ್ದರು.

ಈ ಟೂರ್ನಿಗೆ ಮೂರನೇ ಶ್ರೇಯಾಂಕ ಪಡೆದಿದ್ದ ಕ್ರಿಸ್ಟಿ ವಿರುದ್ಧ ಲಕ್ಷ್ಯ ಕೌಶಲಪೂರ್ಣ ಆಟದಿಂದ ಮೇಲುಗೈ ಸಾಧಿಸಿದರು. ಹುರುಪಿನಿಂದ ಅಂಕಣದುದ್ದಕ್ಕೂ ಓಡಾಡಿ, ಎದುರಾಳಿಯನ್ನು ವಂಚಿಸಿ ರಿಟರ್ನ್‌ಗಳನ್ನು ಮಾಡಿದ ಲಕ್ಷ್ಯ ಮೊದಲ ಗೇಮ್‌ನ ವಿರಾಮದ ವೇಳೆ 11–7ರ ಅಲ್ಪ ಮುನ್ನಡೆ ಕಟ್ಟಿಕೊಂಡಿದ್ದರು. ನಂತರ ಅವರು ಕೆಲವು ತಪ್ಪುಗಳನ್ನು ಎಸಗಿದ ಪರಿಣಾಮ ಕ್ರಿಸ್ಟಿ ಚೇತರಿಸಿ 12–12ರಲ್ಲಿ ಸಮಮಾಡಿಕೊಂಡರು.

ಆದರೆ ಈ ಸಂದರ್ಭದಲ್ಲಿ ಆಟದ ಮಟ್ಟ ಸುಧಾರಿಸಿಕೊಂಡ ಭಾರತದ ಆಟಗಾರ ಪಂದ್ಯದ ಮೇಲೆ ಹಿಡಿತ ಪಡೆದರು. ಎರಡನೇ ಗೇಮ್‌ನಲ್ಲೂ ಅವರ ಕೈಮೇಲಾಯಿತು.

2022ರಲ್ಲಿ ಈ ಕೂಟದ ಫೈನಲ್ ತಲುಪಿದ್ದ ಲಕ್ಷ್ಯ, ಹೋದ ವರ್ಷ ಇದೇ ಎದುರಾಳಿ ಎದುರು ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ್ದರು.

ಆದರೆ ಇತರ ವಿಭಾಗಗಳಲ್ಲಿ ಭಾರತದ ಸ್ಪರ್ಧಿಗಳು ಹೊರಬಿದ್ದರು.

ಹೊರಬಿದ್ದ ಮಾಳವಿಕಾ:

ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಅಕಾನೆ ಯಮಾಗುಚಿ ಮಹಿಳಾ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ  ಒಂದಿಷ್ಟೂ ಪ್ರಯಾಸವಿಲ್ಲದೇ ಭಾರತದ ಮಾಳವಿಕಾ ಅವರನ್ನು 21–16, 21–13ರಿಂದ ಸೋಲಿಸಿದರು. ಇದಕ್ಕೆ ತೆಗೆದುಕೊಂಡಿದ್ದು 33 ನಿಮಿಷಗಳನ್ನಷ್ಟೇ.

ಇವರಿಬ್ಬರ ಮುಖಾಮುಖಿಯಲ್ಲಿ ಜಪಾನ್‌ನ ಆಟಗಾರ್ತಿ 4–0 ದಾಖಲೆ ಹೊಂದಿದ್ದಾರೆ.

ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು ಬುಧವಾರ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್ ಮತ್ತು ರುತ್ವಿಕಾ ಗದ್ದೆ ಜೋಡಿಯ ಸವಾಲು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯಗೊಂಡಿತು. ಚೀನಾದ ವೀ ಯಾ ಷಿನ್– ಫೆಂಗ್‌ ಯನ್‌ ಝೇ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 21–10, 21–12 ರಿಂದ ಭಾರತದ ರೋಹನ್‌– ರುತ್ವಿಕಾ ಜೋಡಿಯನ್ನು ಹಿಮ್ಮೆಟ್ಟಿಸಿತು.

ಸಾತ್ವಿಕ್‌–ಚಿರಾಗ್‌ಗೆ ನಿರಾಸೆ: 

ಪುರುಷರ ಡಬಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಗಾಯಾಳಾದ ಪರಿಣಾಮ ಅರ್ಧದಲ್ಲೇ ಪಂದ್ಯದಿಂದ ನಿವೃತ್ತರಾದರು. ಆ ವೇಳೆ ಎದುರಾಳಿಯಾಗಿದ್ದ ಚೀನಾದ ಝೆಂಗ್‌ ವೀ ಹಾನ್‌– ಷಿ ಹಾವೊ ನಾನ್ ಅವರು 21–16, 2–2ರಲ್ಲಿ ಮುಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.