ಮುಂಬೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ಲಲಿತ್ ಬಾಬು ಅವರು ಮುಂಬೈ ಇಂಟರ್‌ನ್ಯಾಷನಲ್ ಗ್ರ್ಯಾಂಡ್‌ಮಾಸ್ಟರ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಉತ್ತಮ ಟೈಬ್ರೇಕ್ ಸ್ಕೋರ್ ಆಧಾರದಲ್ಲಿ ಅವರು ಅರ್ಮೆನಿಯಾದ ಮಮಿಕಾನ್ ಘರಿಬ್ಯಾನ್ ಅವರನ್ನು ಹಿಂದೆಹಾಕಿದರು.
ಬುಧವಾರ ನಡೆದ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಬಾಬು, ಅಗ್ರ ಶ್ರೇಯಾಂಕದ ಜಾರ್ಜಿಯಾದ ಗ್ರ್ಯಾಂಡ್‌ಮಾಸ್ಟರ್ ಲವಿನ್ ಪಂಟ್ಸುಲಾಯಿಯ ಅವರನ್ನು ಸೋಲಿಸಿ ಒಟ್ಟು ಎಂಟು ಪಾಯಿಂಟ್ಸ್ ಕಲೆಹಾಕಿದರು.
ಇನ್ನೊಂದು ಪಂದ್ಯದಲ್ಲಿ ಭಾರತದ ಜಿಎಂ ನೀಲೋತ್ಪಲ್ ದಾಸ್ ಅವರನ್ನು ಸೋಲಿಸಿದ ಘರಿಬ್ಯಾನ್ ಕೂಡ ಎಂಟು ಪಾಯಿಂಟ್ಸ್ ಗಳಿಸಿದ್ದರು. ಹೀಗಾಗಿ ಅಗ್ರಸ್ಥಾನ ನಿರ್ಧರಿಸಲು ಟೈಬ್ರೇಕ್ ಬಳಸಲಾಯಿತು. ಇದರಲ್ಲಿ ಬಾಬು 54.5, ಅರ್ಮೆನಿಯಾದ ಗ್ರ್ಯಾಂಡ್‌ಮಾಸ್ಟರ್ 54 ಸ್ಕೋರ್ ಗಳಿಸಿದ್ದರು.
ಲಲಿತ್ ಬಾಬು ಟ್ರೋಫಿ ಜೊತ ₹4 ಲಕ್ಷ ನಗದು ಬಹುಮಾನ ಜೇಬಿಗಿಳಿಸಿದರು. ಘರಿಬ್ಯಾನ್ ಅವರು ₹3 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು. ಭಾರತದ ಇನ್ನೊಬ್ಬ ಆಟಗಾರ ದೀಪನ್ ಚಕ್ರವರ್ತಿ ಐದನೇ ಸ್ಥಾನ ಗಳಿಸಿ ₹1.24 ಬಹುಮಾನ ಪಡೆದರು.
ಜೂನಿಯರ್ ವಿಭಾಗದಲ್ಲಿ ಭಾರತದ ಮಾಧೇಶ್ ಕುಮಾರ್ ಚಾಂಪಿಯನ್ ಆದರು. ಅಂತಿಮ ಸುತ್ತಿನಲ್ಲಿ ವ್ಯೋಮ್ ಮಲ್ಹೋತ್ರಾ ಅವರನ್ನು ಮಣಿಸಿ ಟ್ರೋಫಿ ಜೊತೆ ₹2 ಲಕ್ಷ ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.