ADVERTISEMENT

ಮೆಕಿಂಟೋಷ್ ಸವಾಲು ಗೆದ್ದ ಲೆಡೆಕಿ

ವಿಶ್ವ ಈಜು ಚಾಂಪಿಯನ್‌ಷಿಪ್‌: ಮೆಕ್‌ಕೌನ್‌ಗೆ ಚಿನ್ನ ಡಬಲ್‌ ಚಿನ್ನ

ಪಿಟಿಐ
Published 2 ಆಗಸ್ಟ್ 2025, 15:59 IST
Last Updated 2 ಆಗಸ್ಟ್ 2025, 15:59 IST
ಚಿನ್ನ ಗೆದ್ದ ಅಮೆರಿಕದ ಈಜುತಾರೆ ಕೇಟಿ ಲೆಡೆಕಿ (ಎಡ) ಅವರನ್ನು ಕಂಚು ಗೆದ್ದ ಕೆನಡಾದ ಸಮ್ಮರ್‌ ಮೆಕಿಂಟೋಷ್‌ ಅಭಿನಂದಿಸಿದರು –ಎಎಫ್‌ಪಿ ಚಿತ್ರ
ಚಿನ್ನ ಗೆದ್ದ ಅಮೆರಿಕದ ಈಜುತಾರೆ ಕೇಟಿ ಲೆಡೆಕಿ (ಎಡ) ಅವರನ್ನು ಕಂಚು ಗೆದ್ದ ಕೆನಡಾದ ಸಮ್ಮರ್‌ ಮೆಕಿಂಟೋಷ್‌ ಅಭಿನಂದಿಸಿದರು –ಎಎಫ್‌ಪಿ ಚಿತ್ರ   

ಸಿಂಗಪುರ (ಎಎಫ್‌ಪಿ): ಅಮೆರಿಕದ ಅನುಭವಿ ಈಜುತಾರೆ ಕೇಟಿ ಲೆಡೆಕಿ ಅವರು ಶನಿವಾರ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 800 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಕೆನಡಾದ ಸಮ್ಮರ್‌ ಮೆಕಿಂಟೋಷ್‌ ಅವರ ಸವಾಲನ್ನು ಮೆಟ್ಟಿನಿಂತು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

28 ವರ್ಷದ ಲೆಡೆಕಿ ಅವರು ಈ ವಿಭಾಗದ ಸ್ಪರ್ಧೆಯಲ್ಲಿ ತನ್ನ ವೃತ್ತಿಜೀವನದ ಏಳನೇ ವಿಶ್ವ ಚಿನ್ನವನ್ನು ಗೆದ್ದರು. ಆದರೆ, ಈ ಬಾರಿ ಹಿಂದೆಂದೂ ಕಾಣದ ತೀವ್ರ ಪೈಪೋಟಿಯನ್ನು ಅವರು ಎದುರಿಸಿದರು.

ವಿಶ್ವದಾಖಲೆ ಹೊಂದಿರುವ ಲೆಡೆಕಿ ಅವರು 8 ನಿಮಿಷ 05.62 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಚಾಂಪಿಯನ್‌ಷಿಪ್‌ ದಾಖಲೆಯನ್ನೂ ಬರೆದರು. ಅವರಿಗೆ ಪ್ರಬಲ ಸ್ಪರ್ಧೆ ನೀಡಿದ ಆಸ್ಟ್ರೇಲಿಯಾದ ಲ್ಯಾನಿ ಪ್ಯಾಲಿಸ್ಟರ್ (8:05.98) ಮತ್ತು ಮೆಕಿಂತೋಷ್ (8:07.29) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ADVERTISEMENT

ಕೂಟದಲ್ಲಿ ಈಗಾಗಲೇ ಮೂರು ಚಿನ್ನ ಗೆದ್ದಿರುವ 18 ವರ್ಷದ ಮೆಕಿಂಟೋಷ್‌ ಅವರಿಗೆ ಮೊದಲ ಬಾರಿ ಸ್ವರ್ಣ ಕೈತಪ್ಪಿತು. ಒಂದೇ ಕೂಟದಲ್ಲಿ ಐದು ವೈಯಕ್ತಿಕ ಚಿನ್ನ ಗೆದ್ದ ಮೈಕೆಲ್ ಫೆಲ್ಪ್ಸ್‌(ಅಮೆರಿಕ) ಅವರ ದಾಖಲೆಯನ್ನು ಸರಿಗಟ್ಟುವ ಕನಸು ಕಮರಿತು. 400 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಮೆಕಿಂಟೋಷ್‌ ಚಿನ್ನ ಗೆದ್ದರೆ, ಲೆಡೆಕಿ ಕಂಚು ಜಯಿಸಿದ್ದರು.

‘ಈ ಫಲಿತಾಂಶದಿಂದ ನಿಜವಾಗಿಯೂ ಸಂತೋಷವಾಗಿದೆ. ವೃತ್ತಿಜೀವನದ ಈ ಹಂತದಲ್ಲಿ ನಾನು ಕಳೆದುಕೊಳ್ಳಲು ಹೆಚ್ಚೇನೂ ಇಲ್ಲ ಎಂದು ಅನಿಸುತ್ತದೆ’ ಎಂದು ಈ ಸ್ಪರ್ಧೆಯಲ್ಲಿ ನಾಲ್ಕು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಲೆಡೆಕಿ ಪ್ರತಿಕ್ರಿಯಿಸಿದರು.

ಮೆಕ್‌ಕೌನ್‌ಗೆ ಚಿನ್ನ ಡಬಲ್‌: ಆಸ್ಟ್ರೇಲಿಯಾದ ಈಜುಪಟು ಕೈಲಿ ಮೆಕ್‌ಕೌನ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಿದರು. ಮಹಿಳೆಯರ 100 ಮೀಟರ್‌ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿದ್ದ ಅವರು 200 ಮೀಟರ್‌ನಲ್ಲೂ ಸ್ವರ್ಣ ಗೆದ್ದರು.

24 ವರ್ಷದ ಮೆಕ್‌ಕೌನ್‌ ಅವರು ರೇಗನ್‌ ಸ್ಮಿತ್‌ ಅವರ ಸವಾಲನ್ನು ಮೆಟ್ಟಿನಿಂತು 2 ನಿಮಿಷ 03.33 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಚಾಂಪಿಯನ್‌ಷಿಪ್‌ ದಾಖಲೆಗೂ ಪಾತ್ರವಾದರು. ಟೋಕಿಯೊ ಮತ್ತು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಮೆಕ್‌ಕೌನ್‌, ಇದೇ ವಿಭಾಗದ ಸ್ಪರ್ಧೆಯಲ್ಲಿ ಅವಳಿ ಚಿನ್ನ ಗೆದ್ದಿದ್ದರು. ಅಮೆರಿಕದ ರೇಗನ್‌ (2:04.29) ಬೆಳ್ಳಿ ಗೆದ್ದರೆ, ಕ್ಲೇರ್ ಕರ್ಜನ್ (2:06.04) ಕಂಚು ತಮ್ಮದಾಗಿಸಿಕೊಂಡರು. ‌

ಅಮೆರಿಕದ ಗ್ರೆಚೆನ್ ವಾಲ್ಷ್ ಅವರು ಮಹಿಳೆಯರ 50 ಮೀಟರ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. 100 ಮೀಟರ್‌ನಲ್ಲೂ ಅವರು ಚಿನ್ನಕ್ಕೆ ಮುತ್ತಿಕ್ಕಿದ್ದ ಅವರು, 24.83 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಆಸ್ಟ್ರೇಲಿಯಾದ ಅಲೆಕ್ಸಾಂಡ್ರಿಯಾ ಪರ್ಕಿನ್ಸ್ (25.31ಸೆ) ಮತ್ತು ಬೆಲ್ಜಿಯಂನ ರೂಸ್ ವ್ಯಾನೋಟರ್ಡಿಜ್ಕ್ (25.43) ಕ್ರಮವಾಗಿ ನಂತರದ ಸ್ಥಾನ ಪಡೆದರು.

ಪುರುಷರ 50 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಆಸ್ಟ್ರೇಲಿಯಾದ ಕ್ಯಾಮೆರಾನ್ ಮೆಕ್‌ಇವೊಯ್ (21.14ಸೆ) ಚಿನ್ನ ಗೆದ್ದರೆ, ಬ್ರಿಟನ್‌ನ ಬೆನ್ ಪ್ರೌಡ್ (21.26) ಮತ್ತು ಅಮೆರಿಕದ ಜ್ಯಾಕ್ ಅಲೆಕ್ಸಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು.

ಫ್ರಾನ್ಸ್‌ನ ಮ್ಯಾಕ್ಸಿಮ್ ಗ್ರೌಸೆಟ್ ಅವರು (49.62ಸೆ) ಪುರುಷರ 100 ಮೀಟರ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ಸ್ವಿಟ್ಜರ್ಲೆಂಡ್‌ನ ನೋಯ್ ಪೊಂಟಿ (49.83) ಬೆಳ್ಳಿ ಗೆದ್ದರೆ ಮತ್ತು ಕೆನಡಾದ ಇಲ್ಯಾ ಖರುನ್ (50.07) ಕಂಚು ಜಯಿಸಿದರು.  

ರಿಲೆಯಲ್ಲಿ ಅಮೆರಿಕ ವಿಶ್ವದಾಖಲೆ

ಮಿಶ್ರ 4x100 ಮೀಟರ್ ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಅಮೆರಿಕ ತಂಡವು ಚಿನ್ನದ ಸಾಧನೆಯೊಂದಿಗೆ ವಿಶ್ವದಾಖಲೆ ನಿರ್ಮಿಸಿತು. ಅಮೆರಿಕದ ತಂಡವು 3 ನಿಮಿಷ 18.48 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ 2023ರಲ್ಲಿ ಆಸ್ಟ್ರೇಲಿಯಾ ತಂಡ (3:18.83) ನಿರ್ಮಿಸಿದ್ದ ದಾಖಲೆಯನ್ನು ಮುಳುಗಿಸಿತು. ಜ್ಯಾಕ್ ಅಲೆಕ್ಸಿ ಪ್ಯಾಟ್ರಿಕ್ ಸ್ಯಾಮನ್ ಕೇಟ್ ಡಗ್ಲಾಸ್ ಮತ್ತು ಟೊರಿ ಹಸ್ಕೆ ಅವರನ್ನೊಳಗೊಂಡ ತಂಡ ಈ ಸಾಧನೆ ಮಾಡಿತು. ರಷ್ಯಾದ ‘ತಟಸ್ಥ ಅಥ್ಲೀಟ್‌’ಗಳ ತಂಡವು (3:19.68) ಮತ್ತು ಫ್ರಾನ್ಸ್ (3:21.35) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.