ADVERTISEMENT

ಲಿಂಗ ತಾರತಮ್ಯದ ಹೇಳಿಕೆ: ಬಿಎಫ್‌ಐ ಅಧಿಕಾರಿ ವಿರುದ್ಧ ಲವ್ಲಿನಾ ದೂರು

ವಿಚಾರಣೆಗೆ ಸಮಿತಿ ರಚಿಸಿದ ಐಒಎ

ಪಿಟಿಐ
Published 7 ಆಗಸ್ಟ್ 2025, 14:42 IST
Last Updated 7 ಆಗಸ್ಟ್ 2025, 14:42 IST
<div class="paragraphs"><p>ಲವ್ಲಿನಾ ಬೊರ್ಗೊಹೈನ್&nbsp;</p></div>

ಲವ್ಲಿನಾ ಬೊರ್ಗೊಹೈನ್ 

   

ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಷನ್‌ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್ ಅರುಣ್ ಮಲಿಕ್ ಅವರು ‘ಅಗೌರವದ ಮತ್ತು ಲಿಂಗ ತಾರತಮ್ಯದ ಹೇಳಿಕೆ’ ನೀಡಿದ್ದಾರೆ ಎಂದು ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಆರೋಪಿಸಿದ್ದಾರೆ.

ಆರೋಪದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದ್ದು ಶೀಘ್ರವೇ ವರದಿ ಸಲ್ಲಿಸಲಾಗುತ್ತಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಸಾಯ್ ಮಹಾ ನಿರ್ದೇಶಕ, ಟಾಪ್ಸ್‌ (ಟಾರ್ಗೆಟ್‌ ಒಲಿಂಪಿಕ್ ಪೋಡಿಯಂ ಸ್ಕೀಮ್‌) ಮತ್ತು ಭಾರತ ಬಾಕ್ಸಿಂಗ್ ಫೆಡರೇಷನ್‌ ಉದ್ದೇಶಿಸಿ ಬರೆದ ಪತ್ರದಲ್ಲಿ ಲವ್ಲಿನಾ ಈ ಬಗ್ಗೆ ದೂರಿದ್ದಾರೆ. ಜುಲೈ 8ರಂದು ಸಾಯ್ ಮತ್ತು ಟಾಪ್ಸ್‌ ಅಧಿಕಾರಿಗಳು ಭಾಗವಹಿಸಿದ್ದ ಝೂಮ್‌ ಸಭೆಯಲ್ಲಿ ಮಲಿಕ್ ಅವರು ತಮ್ಮನ್ನು ಅವಮಾನಿಸಿದ್ದು, ತಮ್ಮ ಸಾಧನೆಗಳನ್ನು ಕಡೆಗಣಿಸಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಭೆಯ ವೇಳೆ ತಮ್ಮ ವೈಯಕ್ತಿಕ ಕೋಚ್‌ಗೆ (ಅವರೂ ಆನ್‌ಲೈನ್‌ ಸಭೆಯಲ್ಲಿದ್ದರು)  ರಾಷ್ಟ್ರೀಯ ಶಿಬಿರದಲ್ಲಿರಲು ಅವಕಾಶ ನೀಡಬೇಕು, ಯುರೋಪ್‌ ತರಬೇತಿ ಸಮಯದಲ್ಲಿ ತಮ್ಮೊಂದಿಗೆ ತೆರಳಲು ಅನುಮತಿ ನೀಡಬೇಕು ಎಂದು ವಿನಂತಿ ಮಾಡಿದ್ದರು. ಬಿಎಫ್‌ಐ ನಿಯಮದಂತೆ ರಾಷ್ಟ್ರೀಯ ಶಿಬಿರದಲ್ಲಿ ವೈಯಕ್ತಿಕ ಕೋಚ್‌ಗೆ ಭಾಗಿಯಾಲು ಅವಕಾಶವಿರುವುದಿಲ್ಲ.

‘ತಮ್ಮ ಮನವಿಗೆ ಮಲಿಕ್‌ ಒರಟಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು ಉದ್ದೇಶಿಸಿ ತುಚ್ಛವಾಗಿ ಮಾತನಾಡಿದ್ದಾರೆ’ ಎಂದು ಲವ್ಲಿನಾ ಹೇಳಿದ್ದಾರೆ. ‘ಅವರು ಗದರುವ ದಾಟಿಯಲ್ಲಿ ‘ಶಟ್‌ ಅಪ್‌. ತಲೆತಗ್ಗಿಸಿ ಮಾತಾಡಿ. ನಾವು ಹೇಳಿದಷ್ಟೇ ಕೇಳಿ’ ಎಂದಿದ್ದಾರೆ. ಇದು ಅಗೌರವದ ರೀತಿಯಲ್ಲಿತ್ತು, ಮಾತ್ರವಲ್ಲ ಲಿಂಗ ತಾರತಮ್ಯದ ಧಾಟಿಯಲ್ಲಿತ್ತು’ ಎಂದು ದೂರಿನಲ್ಲಿ ಅವರು ವಿವರಿಸಿದ್ದಾರೆ.

‘ಇದು ನನಗಷ್ಟೇ ಆದ ಅವಮಾನವಲ್ಲ, ಇದು ಅಂಕಣದಲ್ಲಿ ಮತ್ತು ಹೊರಗೆ ಉತ್ತಮ ಸಾಧನೆ ಮಾಡಬಯಸುವ ಮಹಿಳಾ ಅಥ್ಲೀಟ್‌ಗೆ ಆದ ಅಪಮಾನ’ ಎಂದಿದ್ದಾರೆ. ಈ ಬಗ್ಗೆ ನ್ಯಾಯಸಮ್ಮತ ಮತ್ತು ತ್ವರಿತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಆದರೆ ಮಲಿಕ್‌ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಲವ್ಲಿನಾ ಅವರ ವಿನಂತಿಗಳನ್ನು ಪರಿಗಣಿಸಿದ್ದೇವೆ ಮತ್ತು ಗೌರವಯುತವಾಗಿ ನಿರಾಕರಿಸಿದ್ದೇವೆ. ಅವು ಬಾಕ್ಸಿಂಗ್ ಫೆಡರೇಷನ್‌ ನಿಯಮಗಳಿಗೆ ಅನುಗುಣವಾಗಿಲ್ಲ’ ಎಂದು ಅವರು ಹೇಳಿದ್ದಾರೆ.

‘2025ರ ಬಿಎಫ್‌ಐ ಆಯ್ಕೆ ನಿಯಮದಂತೆ, ಮೌಲ್ಯಮಾಪನ, ಅಂತರರಾಷ್ಟ್ರೀಯ ಸ್ಪರ್ಧೆಗಳ ಆಯ್ಕೆಗೆ ಪರಿಗಣಿಸಬೇಕಾದರೆ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾಗವಹಿಸುವುದು ಎಲ್ಲ ಕ್ರೀಡಾಪಟುಗಳಿಗೆ ಕಡ್ಡಾಯವಾಗಿದೆ’ ಎಂದು ಅವರು ಉತ್ತರಿಸಿದ್ದಾರೆ.

ಎಲ್ಲರಿಗೂ ಸಮಾನ ಭಾವ ಮೂಡಲು, ರಾಷ್ಟ್ರೀಯ ಶಿಬಿರದಲ್ಲಿ ವೈಯಕ್ತಿಕ ಕೋಚ್ ಅಥವಾ ನೆರವು ಸಿಬ್ಬಂದಿಗೆ ಅವಕಾಶ ಇರುವುದಿಲ್ಲ ಎಂದೂ ಹೇಳಿದ್ದಾರೆ.

ಲವ್ಲಿನಾ ದೂರನ್ನು ಪರಿಗಣಿಸಿರುವ ಐಒಎ, ಸಮಿತಿಯೊಂದನ್ನು ರಚಿಸಿದೆ. ಟಾಪ್ಸ್‌ ಸಿಇಒ ಎನ್‌.ಎಸ್‌.ಜೋಹಲ್, ಐಒಎ ಅಥ್ಲೀಟ್ಸ್ ಕಮಿಷನ್ ವೈಸ್‌ ಚೇರ್ಮನ್‌ ಶರತ್ ಕಮಲ್‌ ಮತ್ತು ಮಹಿಳಾ ವಕೀಲರೊಬ್ಬರು ಸಮಿತಿಯಲ್ಲಿದ್ದಾರೆ.

ಆನ್‌ಲೈನ್‌ ಸಭೆಯಲ್ಲಿ ಲವ್ಲಿನಾ ಮತ್ತು ಮಲಿಕ್ ನಡುವೆ ನಡೆದ ಸಂಭಾಷಣೆ ರೆಕಾರ್ಡ್‌ ಆಗಿದ್ದು, ವಿಚಾರಣಾ ಸಮಿತಿ ಶೀಘ್ರವೇ ವರದಿ ಸಲ್ಲಿಸಲಿದೆ ಎಂದಿದ್ದಾರೆ.

ತನಿಖೆಯನ್ನು ಬೇಗ ಮುಗಿಸುವಂತೆ, ಸಂವಾದದ ವಿಡಿಯೊ ರೆಕಾರ್ಡಿಂಗ್ ಪ್ರತಿ ನೀಡುವಂತೆ ಮಲಿಕ್ ವಿನಂತಿಸಿದ್ದಾರೆ ಎನ್ನಲಾಗಿದೆ. 

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಲವ್ಲಿನಾ ನಿರಾಕರಿಸಿದ್ದಾರೆ. ‘ಈ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ, ಏಕೆಂದರೆ ಅದು ನನ್ನ ಆಟದ ಮೇಲೆ ಪರಿಣಾಮ ಬೀರುತ್ತದೆ. ಸಮಿತಿಯು ನಿರ್ಧಾರಕ್ಕೆ ಬರುವವರೆಗೆ ಏನೂ ಪ್ರತಿಕ್ರಿಯಿಸುವುದಿಲ್ಲ’ ಎಂದು ವಿಶ್ವ ಚಾಂಪಿಯನ್ ಸಹ ಆಗಿರುವ ಲವ್ಲಿನಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.