ಮ್ಯಾಗ್ನಸ್ ಕಾರ್ಲ್‌ಸನ್
ಲಾಸ್ ವೇಗಸ್ (ಅಮೆರಿಕ): ಫ್ರೀಸ್ಟೈಲ್ ಚೆಸ್ ಗ್ರ್ಯಾನ್‌ಸ್ಲಾಮ್ ಟೂರ್ನಿಯು ಅಂತಿಮ ಹಂತ ತಲುಪುತ್ತಿರುವಂತೆ, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಮರಳಿ ಲಯ ಕಂಡುಕೊಳ್ಳುತ್ತಿದ್ದಾರೆ. ಶನಿವಾರ ನಡೆದ ಪಂದ್ಯಗಳಲ್ಲಿ ಅವರು ಭಾರತದ ಅರ್ಜುನ್ ಇರಿಗೇಶಿ ಅವರನ್ನು 2–0 ಯಿಂದ ಮತ್ತು ಆರ್.ಪ್ರಜ್ಞಾನಂದ ಅವರನ್ನು 3–1 ರಿಂದ ಸೋಲಿಸಿದರು.
ಈ ಟೂರ್ನಿಯ ಫೈನಲ್‌ನಲ್ಲಿ, ಅಮೆರಿಕದ ಹ್ಯಾನ್ಸ್ ನೀಮನ್ ಅವರು ಸ್ವದೇಶದ ಲೆವೋನ್ ಅರೋನಿಯನ್ ಅವರನ್ನು ಎದುರಿಸಲಿದ್ದಾರೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಹಣಾಹಣಿಯಲ್ಲಿ ಅಮೆರಿಕದ ಹಿಕಾರು ನಕಾಮುರ, ನಾರ್ವೆಯ ಕಾರ್ಲ್‌ಸನ್ ಅವರನ್ನು ಎದುರಿಸಲಿದ್ದಾರೆ.
6.50 ಕೋಟಿ ಬಹುಮಾನ ಮೊತ್ತದ ಟೂರ್ನಿಯಲ್ಲಿ ವಿಜೇತ ಆಟಗಾರ ₹1.72 ಕೋಟಿ ಬಹುಮಾನ ಪಡೆಯಲಿದ್ದಾರೆ.
ಪ್ರಜ್ಞಾನಂದ ಅವರು ಈ ಮೊದಲು ಗುಂಪು ಹಂತದಲ್ಲಿ ಕಾರ್ಲ್‌ಸನ್ ಮೇಲೆ ಜಯಗಳಿಸಿದ್ದರಿಂದ ಅವರಿಗೆ ಫೈನಲ್ ಹಾದಿ ತಪ್ಪಿತ್ತು. ಕ್ಲಾಸಿಫಿಕೇಷನ್ ಪಂದ್ಯದಲ್ಲಿ ಮೊದಲ ಆಟದಲ್ಲಿ ಪ್ರಜ್ಞಾನಂದ ಜಯಗಳಿಸಿದರು. ಆದರೆ ಎರಡನೇ ಪಂದ್ಯದಲ್ಲಿ ಕಾರ್ಲ್‌ಸನ್ ಗೆದ್ದು ಸ್ಕೋರ್ ಸಮನಾಯಿತು. ಟೈಬ್ರೇಕ್ ಬ್ಲಿಟ್ಝ್ ಪಂದ್ಯಗಳಲ್ಲಿ ನಾರ್ವೆಯ ಆಟಗಾರ ಜಯಗಳಿಸಿದರು.
ಆದರೆ ಮುಂದಿನ ಪಂದ್ಯದಲ್ಲಿ ಕಾರ್ಲ್‌ಸನ್ ಅವರು ಅರ್ಜುನ್ ಇರಿಗೇಶಿ ಅವರನ್ನು ಸೋಲಿಸಿ ಮೂರನೇ ಸ್ಥಾನಕ್ಕಾಗಿ ಆಡುವ ಅವಕಾಶ ಪಡೆದುಕೊಂಡರು.
ಅಂತಿಮ ದಿನ ಐದನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಅರ್ಜುನ್, ಅಮೆರಿಕದ ಫ್ಯಾಬಿಯಾನೊ ಕರುವಾನ ಅವರನ್ನು, ಏಳನೇ ಸ್ಥಾನಕ್ಕಾಗಿ ನಡೆಯುವ ಸೆಣಸಾಟಲ್ಲಿ ಪ್ರಜ್ಞಾನಂದ ಅವರು ಅಮೆರಿಕದ ಇನ್ನೊಬ್ಬ ಆಟಗಾರ ವೆಸ್ಲಿ ಸೊ ಅವರನ್ನು ಎದುರಿಸಲಿದ್ದಾರೆ.
ನೀಮನ್ ಈ ಟೂರ್ನಿಯ ಅಂತಿಮ ಎಂಟರ ಘಟ್ಟ ತಲುಪಿದ್ದ ಆಟಗಾರರಲ್ಲಿ ಅತಿ ಕಡಿಮೆ ಕ್ರಮಾಂಕದ ಆಟಗಾರ ಎನಿಸಿದ್ದರು. ಈಗ ಅವರು ‘ಕಮ್‌ಬ್ಯಾಕ್ ಕಿಂಗ್’ (ಹಿನ್ನಡೆಯಿಂದ ಚೇತರಿಸಿದ್ದ) ಎನಿಸಿರುವ ಅರೋನಿಯನ್ ಅವರನ್ನು ಎದುರಿಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.