
ಕ್ವಾಲಾಲಂಪುರ: ಕರ್ನಾಟಕದ ಯುವತಾರೆ ಆಯುಷ್ ಶೆಟ್ಟಿ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಆಟಗಾರ ಲೀ ಝೀ ಜಿಯಾ ಅವರನ್ನು ಮಂಗಳವಾರ ನೇರ ಗೇಮ್‌ಗಳಲ್ಲಿ ಮಣಿಸಿದರು. ಅದರೊಂದಿಗೆ, ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
ಅನುಭವಿ ಲಕ್ಷ್ಯ ಸೇನ್ ಅವರೂ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.
20 ವರ್ಷ ವಯಸ್ಸಿನ ಆಯುಷ್ ಅವರು 39 ನಿಮಿಷ ನಡೆದ ಹಣಾಹಣಿಯಲ್ಲಿ 21–12, 21–17ರಿಂದ ಆತಿಥೇಯ ಆಟಗಾರನಿಗೆ ಆಘಾತ ನೀಡಿದರು. ಜಿಯಾ ಅವರು 2025ರ ಸೆಪ್ಟೆಂಬರ್‌ನಲ್ಲಿ ನಡೆದ ಚೀನಾ ಮಾಸ್ಟರ್ಸ್ ಟೂರ್ನಿಯಲ್ಲಿ ಗಾಯಗೊಂಡ ಬಳಿಕ ಈ ಟೂರ್ನಿಯಲ್ಲಿ ಸ್ಪರ್ಧಾಕಣಕ್ಕೆ ಮರಳಿದ್ದರು.
ಆಯುಷ್ ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರ, ಚೀನಾದ ಶಿ ಯು ಕೀ ವಿರುದ್ಧ ಸೆಣಸಲಿದ್ದಾರೆ.
24 ವರ್ಷದ ಲಕ್ಷ್ಯ 21-16, 15-21, 21-14 ರಿಂದ ಸಿಂಗಪುರದ ಜಿಯಾ ಹೆಂಗ್ ಜೇಸನ್ ತೆಹ ವಿರುದ್ಧ ಜಯಭೇರಿ ಬಾರಿಸಿದರು. ಉತ್ತರಾಖಂಡದ ಲಕ್ಷ್ಯ ಸೇನ್ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ದೇಶದ ಅಗ್ರಶ್ರೇಯಾಂಕದ ಆಟಗಾರರಾಗಿರುವ ಲಕ್ಷ್ಯ ಸೇನ್‌ಗೆ ಸಿಂಗಪುರದ ಆಟಗಾರ ಕಠಿಣ ಪೈಪೋಟಿಯೊಡ್ಡಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್ ಅವರು 11–21, 11–21ರಿಂದ ಥಾಯ್ಲೆಂಡ್ ದೇಶದ, ಏಳನೇ ಶ್ರೇಯಾಂಕದ ರಚಾನಾಲ್ ಇಂಟನಾನ್ ಎದುರು ಪರಾಭವಗೊಂಡರು.
ಭಾರತದ ಡಬಲ್ಸ್ ಜೋಡಿ ಎಂ.ಆರ್. ಅರ್ಜುನ್– ಹರಿಹರನ್ ಅಂಸಕರುಣನ್ ಅವರು 10–21, 20–22ರಿಂದ ಜಪಾನ್‌ನ ಹಿರೊಕಿ ಮಿಡೊರಿಕಾವಾ– ಕ್ಯೊಹಿ ಯಮಶಿತಾ ವಿರುದ್ಧ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.