ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಪ್ರಿ ಕ್ವಾರ್ಟರ್‌ಗೆ ಪ್ರಣಯ್, ಮಾಳವಿಕಾ

ಪಿಟಿಐ
Published 8 ಜನವರಿ 2025, 14:10 IST
Last Updated 8 ಜನವರಿ 2025, 14:10 IST
ಭಾರತದ ಎಚ್‌.ಎಸ್. ಪ್ರಣಯ್ 
ಭಾರತದ ಎಚ್‌.ಎಸ್. ಪ್ರಣಯ್    

ಕೌಲಾಲಂಪುರ: ಭಾರತದ ಎರಡನೇ ಶ್ರೇಯಾಂಕದ ಆಟಗಾರ ಎಚ್‌.ಎಸ್. ಪ್ರಣಯ್ ಮತ್ತು ಉದಯೋನ್ಮುಖ ಆಟಗಾರ್ತಿ ಮಾಳವಿಕಾ ಬನ್ಸೊದ್ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. 

ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ ಪ್ರಣಯ್ 21-12, 17-21, 21-15 ರಿಂದ ಕೆನಡಾದ ಬ್ರಯನ್ ಯಾಂಗ್ ವಿರುದ್ಧ ಜಯಿಸಿದರು. 

ಈ ಪಂದ್ಯವು ಮಂಗಳವಾರ ಆಯೋಜನೆಯಾಗಿತ್ತು. ಆದರೆ ಎರಡನೇ ಗೇಮ್‌ನಲ್ಲಿ 11–9ರಲ್ಲಿ ಆಟ ನಡೆಯುತ್ತಿದ್ದ ಸಂದರ್ಭದಲ್ಲಿ ಮಳೆ ಬಂದ ಕಾರಣ ಬ್ಯಾಡ್ಮಿಂಟನ್ ಅಂಕಣದ ಚಾವಣಿ ಸೋರಿಕೆಯಾಗಿತ್ತು. ಅದರಿಂದಾಗಿ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಬುಧವಾರ ಮುಂದುವರಿಸಲಾಯಿತು. 

ADVERTISEMENT

ಎರಡನೇ ಗೇಮ್‌ನಲ್ಲಿ ಕೆನಡಾ ಆಟಗಾರ ಮೇಲುಗೈ ಸಾಧಿಸಿದರು. ಇದರಿಂದಾಗಿ ಮೂರನೇ ಮತ್ತು ನಿರ್ಣಾಯಕ ಗೇಮ್ ಕುತೂಹಲ ಕೆರಳಿಸಿತ್ತು. ಅದರಲ್ಲಿ ಪ್ರಣಯ್ ಆರು ಅಂಕಗಳ ಅಂತರದಿಂದ ಜಯಿಸಿದರು. 

ಪ್ರಿ ಕ್ವಾರ್ಟರ್‌ಫೈನಲ್  ಪಂದ್ಯದಲ್ಲಿ ಪ್ರಣಯ್ ಅವರು ಚೀನಾದ ಶಿ ಫೆಂಗ್ ಲೀ ವಿರುದ್ಧ ಸೆಣಸುವರು. ಚೀನಾದ ಆಟಗಾರ ಅರ್ಹತಾ ಸುತ್ತಿನ ಪಂದ್ಯದಲ್ಲಿ 21–11, 21–16ರಿಂದ ಪ್ರಿಯಾಂಶು ರಾಜಾವತ್ ಅವರನ್ನು ಮಣಿಸಿದರು. 

ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಮಾಳವಿಕಾ 21-15, 21-16ರಿಂದ ಸ್ಥಳೀಯ ಆಟಗಾರ್ತಿ ಗೊಹಾ ಜಿನ್ ವೀ ವಿರುದ್ಧ ಗೆದ್ದರು. 45 ನಿಮಿಷಗಳ ಹೋರಾಟದಲ್ಲಿ ಮಾಳವಿಕಾ ನೇರ ಗೇಮ್‌ಗಳಲ್ಲಿ ಜಯಸಾಧಿಸಿದರು. 

ಭಾರತದ ಆಟಗಾರರ ಇನ್ನುಳಿದ ಫಲಿತಾಂಶಗಳು; ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲಾ ಮತ್ತು ತನಿಷಾ ಕ್ರಾಸ್ಟೊ 21-13, 21-14ರಿಂದ ದಕ್ಷಿಣ ಕೊರಿಯಾದ ಸಂಗ್ ಯೂನ್ ಮತ್ತು ಹೇ ವೊನ್ ಇಯಾಮ್ ವಿರುದ್ಧ ಗೆದ್ದರು. ಮುಂದಿನ ಸುತ್ತಿನಲ್ಲಿ ಭಾರತದ ಜೋಡಿಯು ಚೀನಾದ ಏಳನೇ ಶ್ರೇಯಾಂಕದ ಸಿಂಗ್ ಚೆಂಗ್ ಮತ್ತು ಚೀ ಝಾಂಗ್ ಜೋಡಿಯನ್ನು ಎದುರಿಸಲಿದೆ. 

ಇನ್ನೊಂದು ಪಂದ್ಯದಲ್ಲಿ ಸತೀಶಕುಮಾರ್ ಕರುಣಾಕರನ್ ಮತ್ತು ಆದ್ಯಾ ವಾರಿಯತ್ 21-13 21-15ರಿಂದ ಅಶಿತ್ ಸೂರ್ಯ ಮತ್ತು ಅಮೃತಾ ಪ್ರಮುಥೇಶ್ ವಿರುದ್ಧ ಜಯಿಸಿದರು. 

ಮಹಿಳೆಯರ ಡಬಲ್ಸ್‌ನಲ್ಲಿ ಋತುಪರ್ಣಾ ಮತ್ತು ಶ್ವೇತ ಪರ್ಣಾ ಪಂಡಾ 17–21, 10–21ರಿಂದ ಥಾಯ್ಲೆಂಡ್‌ನ ಬೆನಿಯಾಪಾ ಮತ್ತು ನನಟಾಕರ್ಣ್ ಏಮಸರ್ಡ್ ಅವರಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.