ADVERTISEMENT

ಮಂಗಳೂರು: ಕಡಲ ನಗರಿಯಲ್ಲಿ ಬ್ಯಾಡ್ಮಿಂಟನ್ ಮೊರೆತ

ಪುರುಷರ ವಿಭಾಗದಲ್ಲಿ ಅಭಿನವ್ ಗರ್ಗ್‌, ಮಹಿಳೆಯರ ವಿಭಾಗದಲ್ಲಿ ಅಶ್ವತಿ, ಲಕ್ಷ್ಯ, ದಿವ್ಯಾ ಪ್ರಮುಖ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:30 IST
Last Updated 27 ಜುಲೈ 2025, 5:30 IST
ಉರ್ವ ಕ್ರೀಡಾ ಸಂಕೀರ್ಣದ ಬ್ಯಾಡ್ಮಿಂಟನ್ ಅಂಗಣದಲ್ಲಿ ಕ್ರೀಡಾಪುಟಗಳು ಶನಿವಾರ ಸಂಜೆ ಅಭ್ಯಾಸ ನಡೆಸಿದರು  
ಉರ್ವ ಕ್ರೀಡಾ ಸಂಕೀರ್ಣದ ಬ್ಯಾಡ್ಮಿಂಟನ್ ಅಂಗಣದಲ್ಲಿ ಕ್ರೀಡಾಪುಟಗಳು ಶನಿವಾರ ಸಂಜೆ ಅಭ್ಯಾಸ ನಡೆಸಿದರು     

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಆಯೋಜಿಸಿರುವ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ ಇದೇ 27ರಿಂದ ಆಗಸ್ಟ್‌ 2ರ ವರೆಗೆ ನಗರದ ಉರ್ವಸ್ಟೋರ್‌ನ ಹೊಸ ಕ್ರೀಡಾ ಸಂಕಿರ್ಣದಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದಲ್ಲಿ ಟೂರ್ನಿ ನಡೆಯುತ್ತಿದೆ. 

ಕಬಡ್ಡಿ ಮತ್ತು ಬ್ಯಾಡ್ಮಿಂಟನ್‌ ಅಂಗಣಗಳನ್ನು ಹೊಂದಿರುವ ಸಂಕೀರ್ಣ ಉದ್ಘಾಟನೆ ಆದ ನಂತರ ನಡೆಯುತ್ತಿರುವ ಮೊದಲ ಟೂರ್ನಿ ಇದಾಗಿದೆ. ಮುಕ್ತ ಹಾಗೂ 19 ವರ್ಷದೊಳಗಿನವರ ವಿಭಾಗಗಳಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಗಳು ಕುತೂಹಲ ಕೆರಳಿಸಿವೆ. 

ADVERTISEMENT

ಮೊದಲ ಮೂರು ದಿನ ಅರ್ಹತಾ ಸುತ್ತು ಮತ್ತು ನಂತರದ ನಾಲ್ಕು ದಿನ ಮುಖ್ಯ ಸುತ್ತಿನ ಹಣಾಹಣಿ ಇರುತ್ತದೆ. ಪುರುಷರ ಮುಕ್ತ ಮತ್ತು 19 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಅಂತರರಾಷ್ಟ್ರೀಯ ಆಟಗಾರ ಬೆಂಗಳೂರಿನ ಅಭಿನವ್ ಗರ್ಗ್‌ ಅವರಿಗೆ ಅಗ್ರ ಶ್ರೇಯಾಂಕ ನೀಡಿದ್ದು ಬೆಂಗಳೂರಿನ ಅಶ್ವತಿ ವರ್ಗೀಸ್ ಅವರಿಗೆ ಮಹಿಳೆಯರ ಮುಕ್ತ ವಿಭಾಗದಲ್ಲಿ ಮೊದಲ ಶ್ರೇಯಾಂಕ ನೀಡಲಾಗಿದೆ. ಮಹಿಳೆಯರ 19 ವರ್ಷದೊಳಗಿನವರ ವಿಭಾಗದಲ್ಲಿ ಅಂತರರಾಷ್ಟ್ರೀಯ ಆಟಗಾರ್ತಿ ದಿವ್ಯಾ ಭೀಮಯ್ಯ ಮೊದಲ ಶ್ರೇಯಾಂಕ ಹೊಂದಿದ್ದಾರೆ. 

ಭಾನುವಾರ ಬೆಳಿಗ್ಗೆ 9 ಗಂಟೆಗೆ ಅರ್ಹತಾ ಸುತ್ತಿನಲ್ಲಿ ಹರ್ಷವರ್ಧನ್ ಮತ್ತು ಸೌಮ್ಯ ಪಟೇಲ್ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಅದರ ನಂತರ ಸೂರಜ್ ರಾವ್ ಮತ್ತು ಆದಿತ್ಯ ಕುರುವಿಳ ನಡುವೆ ಪಂದ್ಯ ನಡೆಯಲಿದೆ. ಇದರ ಬೆನ್ನಲ್ಲೇ ಮುಕ್ತ ವಿಭಾಗದ ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಮಹಿಳೆಯರ ವಿಭಾಗದ ಅರ್ಹತಾ ಪಂದ್ಯಗಳು ಸೋಮವಾರ ಆರಂಭಗೊಳ್ಳಲಿವೆ. ಅಂದು ಬೆಳಿಗ್ಗೆ 11.30ಕ್ಕೆ ಮುಕ್ತ ವಿಭಾಗದ ಮೊದಲ ಪಂದ್ಯದಲ್ಲಿ ಹೇಮಿತಾ ಶ್ರೀನಿವಾಸ್ ಮತ್ತು ಐಶ್ವರ್ಯಾ ಅಗಡಿ ಸೆಣಸಲಿದ್ದಾರೆ.

ಅಭಿನವ್ ಆಕರ್ಷಣೆ

ರಾಜ್ಯದ ಕುಡಿಮೀಸೆಯ ಆಟಗಾರರ ಪೈಕಿ ಮಿಂಚುತ್ತಿರುವ ಅಭಿವನ್, ಮಂಗಳೂರಿನ ಟೂರ್ನಿಯ ಪ್ರಮುಖ ಆಕರ್ಷಣೆ. ಮೇ ತಿಂಗಳಲ್ಲಿ ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಅಂಗಣದಲ್ಲಿ ನಡೆದ ಟೂರ್ನಿಯಲ್ಲಿ ಪುರುಷರ ಮತ್ತು 19 ವರ್ಷದೊಳಗಿನವರ ವಿಭಾಗದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು ಭರವಸೆಯೊಂದಿಗೆ ಕಡಲ ನಗರಿಗೆ ಕಾಲಿಡಲಿದ್ದಾರೆ. ಇಲ್ಲಿಯೂ ಅವರು ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಅಶ್ವತಿ ವರ್ಗೀಸ್ ಮಿಂಚುವ ನಿರೀಕ್ಷೆ ಇದೆ. ಕೆಬಿಎಯಲ್ಲಿ ನಡೆದ ಟೂರ್ನಿಯಲ್ಲಿ ಮಹಿಳೆಯರ ವಿಭಾಗದ ಪ್ರಶಸ್ತಿ ಅವರ ಪಾಲಾಗಿತ್ತು.

19 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಲಕ್ಷ್ಯ ರಾಜೇಶ್ ಮತ್ತು ದಿವ್ಯಾ ಭೀಮಯ್ಯ ಗಮನ ಸೆಳೆಯಲಿದ್ದಾರೆ. ಕೆಬಿಎ ಟೂರ್ನಿಯಲ್ಲಿ ಲಕ್ಷ್ಯ ಪ್ರಶಸ್ತಿ ಗೆದ್ದಿದ್ದು ದಿವ್ಯಾ ರನ್ನರ್ ಅಪ್ ಆಗಿದ್ದರು. ಮುಕ್ತ ವಿಭಾಗದಲ್ಲಿ ಲಕ್ಷ್ಯ ಸೆಮಿಫೈನಲ್‌ನಲ್ಲಿ ಸೋತಿದ್ದರು. ಮುಕ್ತ ಪುರುಷರ ವಿಭಾಗದಲ್ಲಿ ರುದ್ರ ಶಾಹಿ, 19 ವರ್ಷದೊಳಗಿನವರ ವಿಭಾಗದಲ್ಲಿ ಹಾರ್ದಿಕ್‌ ದಿವ್ಯಾಂಶ್‌ ಕೂಡ ಸ್ಪರ್ಧೆಯಲ್ಲಿದ್ದಾರೆ.

ಅಭಿನವ್ ಗರ್ಗ್‌

ಡಬಲ್ಸ್‌ ಜೋಡಿಗಳ ಆಕರ್ಷಣೆ

ಪುರುಷರ ಡಬಲ್ಸ್‌ನಲ್ಲಿ ಆಶಿತ್ ಸೂರ್ಯ ಮತ್ತು ವೈಭವ್ ಪುರುಷರ 19 ವರ್ಷೊದೊಳಗಿವನರ ಡಬಲ್ಸ್‌ನಲ್ಲಿ ಪವನ್‌ ಮತ್ತು ಪುನೀತ್ ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಭಟ್‌ ಮತ್ತು ಶಿಖಾ ಗೌತಮ್‌ 19 ವರ್ಷದೊಳಗಿನವರ ವಿಭಾಗದಲ್ಲಿ ನಿಧಿ ಆತ್ಮಾರಾಮ್ ಮತ್ತು ಸೆಲ್ವಸಮೃದ್ಧಿ ಮುಕ್ತ ವಿಭಾಗದ ಮಿಶ್ರ ಡಬಲ್ಸ್‌ನಲ್ಲಿ ಆಶಿತ್ ಸೂರ್ಯ–ಅಮೃತಾ ಪ್ರಮುತೇಶ್‌ 19 ವರ್ಷದೊಳಗಿನವರ ಮಿಶ್ರ ಡಬಲ್ಸ್‌ನಲ್ಲಿ ಧ್ಯಾನ್‌ ಸಂತೋಷ್‌–ದಿಶಾ ಸಂತೋಷ್ ಜೋಡಿ ಪ್ರಮುಖ ಆಕರ್ಷಣೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.