ADVERTISEMENT

ಮಂಗಳೂರು: ಮಾಜಿ ಕಬಡ್ಡಿ ಆಟಗಾರ ಉದಯ ಚೌಟ ನಿಧನ

​ಪ್ರಜಾವಾಣಿ ವಾರ್ತೆ
Published 21 ಮೇ 2022, 6:13 IST
Last Updated 21 ಮೇ 2022, 6:13 IST
ಉದಯ ಚೌಟ
ಉದಯ ಚೌಟ   

ಮಂಗಳೂರು: ಏಕಲವ್ಯ ಪುರಸ್ಕೃತ, ಅಂತರ ರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ ಉದಯ ಚೌಟ(43) ಅವರು ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಉದಯ ಚೌಟ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮಾಣಿಯವರು. ಶನಿವಾರ ಬೆಳಗಿನ ಜಾವ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ.

2006–07 ರಲ್ಲಿ ಮುಂಬೈಯಲ್ಲಿ ನಡೆದ 2ನೇ ವಿಶ್ವಕಪ್‌ ಕಬಡ್ಡಿ ಟೂರ್ನಿಯಲ್ಲಿ ಅತ್ಯತ್ತಮ ಆಟಗಾರರಾಗಿ ಹೊರಹೊಮ್ಮಿದ್ದರು. ಇದಕ್ಕಾಗಿ ಅವರಿಗೆ ಅತ್ಯತ್ತಮ ಪ್ರಶಸ್ತಿ ಕೂಡ ಬಂದಿತ್ತು.

ADVERTISEMENT

ಉದಯ ಚೌಟ ಅವರು ನಾಲ್ಕು ವರ್ಷಗಳ ಕಾಲ ಅಂತರ ಕಾಲೇಜು ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಂಡು ಜಯ ದಾಖಲಿಸಿ ಅಂತರ ವಿವಿಗೆ ಮಂಗಳೂರು ವಿವಿ ಪ್ರತಿನಿಧಿಸಿದ್ದರು.

ಜೂನಿಯರ್‌ ನ್ಯಾಷನಲ್‌, ಸೀನಿಯರ್‌ ನ್ಯಾಷನಲ್‌ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆ ಅವರದು. ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. 2004 ರಲ್ಲಿ ಭಾರತ– ಬಾಂಗ್ಲಾ ಟೆಸ್ಟ್‌ ಕಬಡ್ಡಿಯ 5 ಟೂರ್ನಿಯಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕ ದಾಖಲಿಸಿದ್ದರು. ಉತ್ತಮ ರೈಡರ್‌ ಆಗಿದ್ದರು.

ಬ್ಯಾಂಕ್‌ ಬರೋಡಾದಲ್ಲಿ ಉದ್ಯೋಗಿ ಆಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌ ಸಂಘಟನಾ ಕಾರ್ಯದರ್ಶಿ ಆಗಿದ್ದರು.

ಅಂತರರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಮಿಂಚಿದ್ದ ಜಿಲ್ಲೆಯ ಕ್ರೀಡಾಪಟು ಉದಯ ಚೌಟ ಅವರ ನಿಧನದಿಂದ ತೀವ್ರ ಆಘಾತವಾಗಿದೆ. ಕಬಡ್ಡಿ ಕ್ರೀಡೆಗೆ ತುಂಬಲಾರದ ನಷ್ಟ ತಂದಿದೆ ಎಂದು ಕಬಡ್ಡಿ ತರಬೇತುದಾರ ಪುರುಷೋತ್ತಮ ಪೂಜಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.