ADVERTISEMENT

ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ

'ಚೀಫ್ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್‌ 2025’ ಉದ್ಘಾಟಿಸಲಿರುವ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
<div class="paragraphs"><p>‘ಚೀಫ್ ಮಿನಿಸ್ಟರ‍್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ 2025’ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿರುವ&nbsp; ಆಟಗಾರರು ಉರ್ವದ ಒಳಾಂಗಣದ ಕ್ರೀಡಾಂಗಣದಲ್ಲಿ ಭಾನುವಾರ ಅಭ್ಯಾಸ ನಡೆಸಿದರು.</p></div>

‘ಚೀಫ್ ಮಿನಿಸ್ಟರ‍್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ 2025’ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿರುವ  ಆಟಗಾರರು ಉರ್ವದ ಒಳಾಂಗಣದ ಕ್ರೀಡಾಂಗಣದಲ್ಲಿ ಭಾನುವಾರ ಅಭ್ಯಾಸ ನಡೆಸಿದರು.

   

ಪ್ರಜಾವಾಣಿ ಚಿತ್ರ/ ಫಕ್ರುದ್ದೀನ್ ಎಚ್‌

ಮಂಗಳೂರು: ಕಡಲ ನಗರಿಯು  ‘ಚೀಫ್ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ 2025’ ಬಿಡಬ್ಲ್ಯುಎಫ್‌  ಬ್ಯಾಡ್ಮಿಂಟನ್‌ ಟೂರ್ನಿಗೆ ಸಜ್ಜಾಗಿದೆ.

ADVERTISEMENT

ಭಾರತ ಬ್ಯಾಂಡ್ಮಿಂಟನ್‌ ಸಂಸ್ಥೆ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಹಾಗೂ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಸಂಸ್ಥೆ ಆಶ್ರಯದಲ್ಲಿ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ  ಸೋಮವಾರದಿಂದ ನವೆಂಬರ್ 2ರವರೆಗೆ ಟೂರ್ನಿ ನಡೆಯಲಿದೆ.  ಪುರುಷರ ಸಿಂಗಲ್ಸ್‌, ಡಬಲ್ಸ್‌, ಮಹಿಳೆಯರ ಸಿಂಗಲ್ಸ್‌, ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ಹಣಾಹಣಿಗೆ ವೇದಿಕೆಯಾಗಲಿದೆ. 

ಪುರುಷರ ಸಿಂಗಲ್ಸ್‌ನಲ್ಲಿ 112 ಆಟಗಾರರು, ಡಬಲ್ಸ್‌ನಲ್ಲಿ 51 ಜೋಡಿಗಳು, ಮಹಿಳೆಯರ ಸಿಂಗಲ್ಸ್‌ನಲ್ಲಿ 83 ಆಟಗಾರ್ತಿಯರು, ಮಹಿಳೆಯರ ಡಬಲ್ಸ್‌ನಲ್ಲಿ 36 ಜೋಡಿಗಳು ಹಾಗೂ ಮಿಶ್ರ ಡಬಲ್ಸ್‌ನಲ್ಲಿ 41 ಜೋಡಿಗಳು ತಮ್ಮ ಸಾಮರ್ಥ್ಯ ಪರೀಕ್ಷೆಗೆ ಇಳಿಯಲಿವೆ. ಒಟ್ಟು ₹21.95 ಲಕ್ಷ (25 ಸಾವಿರ ಅಮೆರಿಕದ ಡಾಲರ್‌) ಪ್ರಶಸ್ತಿ ಮೊತ್ತವಿದೆ. 

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಋತ್ವಿಕ್ ಸಂಜೀವಿ ಸತೀಶ್‌ ಕುಮಾರ್‌ (ವಿಶ್ವ ಕ್ರಮಾಂಕದಲ್ಲಿ 63ನೇ ಸ್ಥಾನ), ಮನರಾಜ್ ಸಿಂಗ್‌ (65), ಬಿ.ಎಂ. ರಾಹುಲ್ ಭಾರದ್ವಾಜ್‌ (95), ಮೇರಬಾ ಲುವಾಂಗ್‌ ಮೈಸ್ನವ್‌, ಕೆನಡಾದ ಶೌರ್ಯ ಗುಲ್ಲಯ್ಯ (228), ಶ್ರೀಲಂಕಾದ ಅಹಿಂಸಾ ಹೆರಾತ್‌ (257) ಸೆಣಸಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಿಂಗಪುರದ ಎಂಗ್‌ ಕೀಟ್‌ ಎಸ್ಲೆ ಕೊ ಮತ್ತು ಜಾನ್ಸುಕೆ ಕ್ಯೂಬೊ ಜೋಡಿ (60ನೇ ರ‍್ಯಾಂಕ್‌), ಭಾರತದ ರೂಬನ್ ಕುಮಾರ್‌ ರೆತಿನಾ ಸಭಾಪತಿ ಮತ್ತು ವಿಷ್ಣುವರ್ಧನ್‌ ಗೌಡ ಪಂಜಾಳ (ಶ್ರೇಯಾಂಕರಹಿತ), ಥಾಯ್ಲೆಂಡ್‌ನ ವೋರಾಪೋಲ್‌ ತೊಂಗ್‌ಸಾಂಗ್ ಮತ್ತು ಚಾರೋಂಕಿಟಾಮೋರ್ನ್‌ (73), ಭಾರತದ ಅಮಾನ್‌ ಮಹಮ್ಮದ್‌ ಮತ್ತು ಡಿಂಕು ಸಿಂಗ್‌ ಕೊಂಟೊಜಾಮ್‌ (75), ಥಾಯ್ಲೆಂಡ್‌ನ ಟಂಡನ್ ಪುನ್‌ಪನಿಕ್‌ ಮತ್ತು ಫರಾನ್ಯು ಕಾವೊಸಮಾಂಗ್‌ (79) ಜೋಡಿಗಳು ಸಾಮರ್ಥ್ಯ ಪ್ರದರ್ಶನಕ್ಕೆ ಅಣಿಯಾಗಿವೆ. 

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಇಷಿಕಾ ಜೈಸ್ವಾಲ್‌ (60), ಭಾರತದ ಶ್ರೇಯಾ ಲೇಲೆ (89), ಮಾನ್ವಿ ಸಿಂಗ್‌ (97), ಶ್ರೀಲಂಕಾದ ವರಾಂಗನಾ ಜಯವರ್ದನ (398) ಮೊದಲಾದ ಆಟಗಾರ್ತಿಯರ ನಡುವೆ ಪ್ರಶಸ್ತಿಗಾಗಿ ಹಣಾಹಣಿ ನಡೆಯಲಿದೆ. 

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಭಟ್ ಕೆ. ಮತ್ತು ಶಿಖಾ ಗೌತಮ್‌ (94), ಶ್ರುತಿ ಮಿಶ್ರಾ ಮತ್ತು ಪ್ರಿಯಾ ಕಾಂಜೆಂಗ್‌ಬಾಮ್‌, ಥಾಯ್ಲೆಂಡ್‌ನ ಹಾಥೈಥಿಪ್‌ ಮಿಜಾಡ್‌ ಮತ್ತು ನಾಪಪ್‌ಕೋರ್ನ್‌ ತುಂಗ್‌ಕಾಸಟನ್‌, ನನ್ನಪಾಸ್ ಸುಕ್ಕಲದ್ ಮತ್ತು ಪಿಚಮೋನ್ ಫಚರಫಿಸುಟ್ಸಿನ್‌ (63), ಭಾರತದ ಸಾನಿಯಾ ಸಿಕಂದರ್‌ ಮತ‌‌ತು ರಶ್ಮಿ ಗಣೇಶ್ (82), ಶ್ರೀಲಂಕಾದ ಸಿಥುಮಿ ಡಿಸಿಲ್ವ ಮತ್ತು ಇಸುರಿ ಅಟ್ಟನಯಾಕೆ (95) ಮುಂತಾದ ಜೋಡಿಗಳು ಹೋರಾಟಕ್ಕೆ ಸಜ್ಜಾಗಿವೆ. 

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅಶಿತ್ ಸೂರ್ಯ ಮತ್ತು ಅಮೃತಾ ಪುಮುತೇಶ್‌ (38), ಧ್ರುವ ರಾವತ್‌ ಮತ್ತು ಮನಿಷಾ ಕೆ. (89) ಥಾಯ್ಲೆಂಡ್‌ನ ಪೊಂಗ್ಸಾಕೋರ್ನ್‌ ಥೋಂಗ್‌ಖಾನ್‌ ಮತ್ತು ನನ್ನಪಾಸ್ ಸುಕ್ಕಲದ್‌, ಪುಟಿಮೆತ್‌ ಸೆಮ್‌ಕುಂಟ ಮತ್ತು ಫಂಗ್‌ಫಕೋಫ್ತಮಕಿಟ್ ಮೊದಲಾದ ಜೋಡಿಗಳು ಆಖಾಡಕ್ಕೆ ಇಳಿಯಲಿವೆ.  

ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟು ₹39 ಕೋಟಿ ಮೊತ್ತದಲ್ಲಿ ಉರ್ವದಲ್ಲಿ ನಿರ್ಮಿಸಲಾದ ಜಾಗತಿಕ ದರ್ಜೆಯ ಬ್ಯಾಡ್ಮಿಂಟನ್ ಕ್ರೀಡಾಂಗಣದ ನೆಲ ಮಹಡಿಯ ಆರು ಅಂಕಣಗಳಲ್ಲಿ ಹಾಗೂ ಮೂರನೇ ಮಹಡಿಯ ಐದು ಅಂಕಣಗಳಲ್ಲಿ ಪಂದ್ಯಗಳು ನಡೆಯಲಿವೆ. ಈ ಕ್ರೀಡಾಂಗಣವು ಒಟ್ಟು 1300 ಮಂದಿ ಪಂದ್ಯ ವೀಕ್ಷಿಸುವ ವ್ಯವಸ್ಥೆ ಇದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೂರ್ನಿಗೆ ಸೋಮವಾರ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಟೂರ್ನಿಯ ಮಹತ್ವ

‘ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಆಯೋಜಿಸುತ್ತಿರುವ ಮಹತ್ವದ ಟೂರ್ನಿ ಇದಾಗಿದೆ. ಫೆಡರೇಷನ್‌ನ ಪ್ರಥಮ ಲೆವೆಲ್‌–ಮೂರನೇ ಶ್ರೇಣಿಯ ಟೂರ್ನಿ ಇದು. ಆಟಗಾರರಿಗೆ ಶ್ರೇಯಾಂಕ ಗಳಿಸಲು ಸಹಾಯಕ ವಾಗಲಿದೆ. ವಿವಿಧ ದೇಶಗಳ ಆಟಗಾರರು ಭಾಗವಹಿಸುವ ಈ ಟೂರ್ನಿ ಉದಯೊನ್ಮುಖ ಆಟಗಾರರಿಗೆ ಹುರುಪು ತುಂಬಲಿದೆ. ಮಂಗಳೂರಿನಲ್ಲಿ ಇಂತಹ ಟೂರ್ನಿಯನ್ನು ಆಯೋಜನೆಗೊಳ್ಳುತ್ತಿರುವುದು ಪ್ರದೇಶದ ಬ್ಯಾಡ್ಮಿಂಟನ್‌ ಆಟಗಾರರಿಗೆ ಉತ್ತೇಜನ ಸಿಗುವ ನಿರೀಕ್ಷೆ ಇದೆ’ ಎಂದು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.