ADVERTISEMENT

100 ಮೀ.: ರಾಷ್ಟ್ರೀಯ ದಾಖಲೆ ಮುರಿದ ಮಣಿಕಂಠ

ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಕೂಟ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 16:32 IST
Last Updated 11 ಅಕ್ಟೋಬರ್ 2023, 16:32 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ಸರ್ವಿಸಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಕನ್ನಡಿಗ ಎಚ್‌.ಎಚ್‌.ಮಣಿಕಂಠ ಅವರು ಬುಧವಾರ ಆರಂಭವಾದ 62ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗೌರವಕ್ಕೆ ಪಾತ್ರರಾದರು.

ಮಧ್ಯಾಹ್ನದ ನಂತರ ಮಳೆಯಿಂದಾಗಿ ಕಂಠೀರವ ಕ್ರೀಡಾಂಗಣದಲ್ಲಿ ಕೆಲವು ಸ್ಪರ್ಧೆಗಳಿಗೆ ಅಡ್ಡಿಯಾಯಿತು. ಉಡುಪಿ ಜಿಲ್ಲೆ ನಾವುಂದ ಮೂಲದ ಮಣಿಕಂಠ ಅವರು ಮೂರನೇ ಸೆಮಿಫೈನಲ್ ಹೀಟ್ಸ್‌ನಲ್ಲಿ ಈ ಓಟವನ್ನು 10.23 ಸೆಕೆಂಡುಗಳಲ್ಲಿ ಪೂರೈಸಿದರು. ಈ ಹಿಂದಿನ ದಾಖಲೆಯನ್ನು  (10.26 ಸೆ.) ಒಡಿಶಾದ ಅಮಿಯ ಕುಮಾರ್ ಮಲಿಕ್ ಅವರು ಏಳು ವರ್ಷಗಳ ಹಿಂದೆ ರಾಷ್ಟ್ರೀಯ ಫೆಡರೇಷನ್ ಕಪ್‌ನಲ್ಲಿ ಸ್ಥಾಪಿಸಿದ್ದರು. ಕೂಟ ದಾಖಲೆ (ವಾರಂಗಲ್‌ನಲ್ಲಿ 10.34 ಸೆ.) ಆಮ್ಲನ್ ಬೋರ್ಗೊಹೈನ್ ಅವರ ಹೆಸರಿನಲ್ಲಿತ್ತು.

ADVERTISEMENT

‘ಬಾಲ್ಯವನ್ನು ಉಡುಪಿಯಲ್ಲಿ ಕಳೆದಿದ್ದೆ. ಕ್ರೀಡಾಹಾಸ್ಟೆಲ್‌ನಲ್ಲಿ ನಾನು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಬೆಂಗಳೂರಿಗೆ ಬಂದು ಒಂದು ವರ್ಷದ ನಂತರ ಸೇನೆಗೆ ಸೇರ್ಪಡೆಯಾದೆ’ ಎಂದು ಮಣಿಕಂಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೈದರಾಬಾದ್‌ನ ಸೇನಾ ಕ್ರೀಡಾಕೇಂದ್ರದಲ್ಲಿ ಅವರು ಈ ಓಟದಲ್ಲಿ ಉತ್ತಮ ಸಾಧನೆ ತೋರಲು  ಶ್ರಮ ಹಾಕುತ್ತಿದ್ದಾರೆ. ಕಳೆದ ತಿಂಗಳು ಸರ್ವಿಸಸ್‌ ಕ್ರೀಡಾಕೂಟದಲ್ಲಿ ಅವರು 10.31 ಸೆ.ಗಳಲ್ಲಿ ಓಡಿದ್ದರು. ಅವರು ಶೀಘ್ರ 10.10 ಸೆ. ಅವಧಿಯೊಳಗೆ ಓಡಬಲ್ಲರೆಂಬ ವಿಶ್ವಾಸವಿದೆ’ ಎಂದು ಮಣಿಕಂಠ ಅವರ ಕೋಚ್‌ ಅಬೂಬಕ್ಕರ್ ಟಿ. ತಿಳಿಸಿದರು.

ಮಹಾರಾಷ್ಟ್ರದ ದಿನೇಶ್ ಅವರು ಪುರುಷರ 10,000 ಮೀ. ಓಟದಲ್ಲಿ ಸರ್ವಿಸಸ್‌ನ ಇಬ್ಬರು ಸ್ಪರ್ಧಿಗಳಾದ ಮೋಹನ್ ಸೈನಿ ಮತ್ತು ಸಂದೀಪ್‌ ಸಿಂಗ್‌ ಅವರಿಂದ ತೀವ್ರ ಪೈಪೋಟಿ ಎದುರಿಸಿದರೂ ಅಂತಿಮ ಕ್ಷಣಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿ ಚಿನ್ನ ಗೆದ್ದರು.

ಉಳಿದಂತೆ ಮೊದಲ ದಿನ ನಾಲ್ಕು ಫೈನಲ್‌ಗಳು ನಡೆದವು.

ಫಲಿತಾಂಶಗಳು ಇಂತಿವೆ:

ಪುರುಷರು: 10,000 ಮೀ. ಓಟ: ದಿನೇಶ್ (ಮಹಾರಾಷ್ಟ್ರ, ಕಾಲ: 29 ನಿ, 10.11 ಸೆ.)–1, ಮೋಹನ್ ಸೈನಿ (ಎಸ್‌ಎಸ್‌ಸಿಬಿ, ಕಾಲ: 29ನಿ.10.82 ಸೆ.)–2, ಸಂದೀಪ್ ಸಿಂಗ್‌ (ಎಸ್‌ಎಸ್‌ಸಿಬಿ, ಕಾಲ: 29ನಿ. 11.21 ಸೆ)–3; ಪೋಲ್‌ವಾಲ್ಟ್‌: ದೇವ್‌ ಮೀನಾ (ಮಧ್ಯಪ್ರದೇಶ)–1, ಶೇಖರ್ ಪಾಂಡೆ (ಉತ್ತರ ಪ್ರದೇಶ)–2, ತನುಜ್ ಕುಮಾರ್ (ಹರಿಯಾಣ)–3, ಎತ್ತರ: 5.05 ಮೀ.

ಮಹಿಳೆಯರು: 10,000 ಮೀ. ಓಟ: ಸೀಮಾ (ಹಿಮಾಚಲಪ್ರದೇಶ, ಕಾಲ: 33ನಿ.26.90 ಸೆ.)–1, ಕವಿತಾ ಯಾದವ್‌ (ರೈಲ್ವೇಸ್‌, ಕಾಲ: 33ನಿ.35.56 ಸೆ.)–2, ಫೂಲನ್‌ ಪಾಲ್‌ (ಉತ್ತರ ಪ್ರದೇಶ, ಕಾಲ: 34ನಿ.55.13 ಸೆ.); ಹ್ಯಾಮರ್‌ ಥ್ರೊ: ಅನ್ಮೋಲ್ ಕೌರ್‌ (ಪೊಲೀಸ್‌ ಕ್ರೀಡಾ ಮಂಡಳಿ)–1, ತಾನ್ಯಾ ಚೌಧರಿ (ಉತ್ತರ ಪ್ರದೇಶ)–2,  ಸರಿತಾ ಸಿಂಗ್‌ (ರೈಲ್ವೇಸ್‌)–3, ದೂರ: 60.19 ಮೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.