ADVERTISEMENT

ಏಷ್ಯನ್‌ ಕುಸ್ತಿ: ಮನೀಶಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 0:12 IST
Last Updated 29 ಮಾರ್ಚ್ 2025, 0:12 IST
ಮನೀಶಾ
ಮನೀಶಾ   

ಅಮ್ಮಾನ್‌: ಭಾರತದ ಕುಸ್ತಿಪಟು ಮನೀಶಾ ಭನ್ವಾಲಾ ಅವರು ಶುಕ್ರವಾರ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಯುವ ಕುಸ್ತಿಪಟು ಅಂತಿಮ್ ಪಂಘಲ್ ಕಂಚಿನ ಪದಕ ಗೆದ್ದರು.

2022ರಿಂದ ಸತತ ಮೂರು ಕಂಚಿನ ಪದಕ ಗೆದ್ದಿರುವ 25 ವರ್ಷ ವಯಸ್ಸಿನ ಮನೀಶಾ ಫೈನಲ್‌ ಹಣಾಹಣಿಯಲ್ಲಿ 8-7 ಅಂತರದಿಂದ ಕೊರಿಯಾದ ಓಕೆ ಜೆ ಕಿಮ್ ಅವರನ್ನು ಮಣಿಸಿದರು. ಈ ಮೂಲಕ 2021ರ ಆವೃತ್ತಿಯ ನಂತರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. 

ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮನೀಷಾ ಒಂದು ಹಂತದಲ್ಲಿ 2-7 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದರು. ನಂತರ ಸತತ ಆರು ಅಂಕಗಳನ್ನು ಕಲೆಹಾಕಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನದ ಸಾಧನೆ ಮಾಡಿದರು.

ADVERTISEMENT

2022ರಿಂದ ಸತತ ಮೂರು ಕಂಚಿನ ಪದಕ ಗೆದ್ದಿರುವ 25 ವರ್ಷ ವಯಸ್ಸಿನ ಮನೀಶಾ ಕಜಕಿಸ್ತಾನದ ಟೈನಿಸ್ ಡುಬೆಕ್ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದ್ದರು. ನಂತರ ದಕ್ಷಿಣ ಕೊರಿಯಾದ ಹ್ಯಾನ್ಬಿಟ್ ಲೀ ಅವರನ್ನು ಸೋಲಿಸಿದ್ದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಭಾರತದ ಸ್ಪರ್ಧಿ 5–1ಯಿಂದ ಕಜಕಿ ಸ್ತಾನದ ಕಲ್ಮಿರಾ ಬಿಲಿಂಬೆಕ್ ಅವರನ್ನು ಮಣಿಸಿದ್ದರು. 

20 ವರ್ಷ ವಯಸ್ಸಿನ ಅಂತಿಮ್ (ಮಹಿಳೆಯರ 53 ಕೆ.ಜಿ ವಿಭಾಗ) ಕಂಚಿನ ಪ್ಲೇ ಆಫ್‌ನಲ್ಲಿ  ಚೀನಾ ತೈಪೆಯ ಮೆಂಗ್ ಎಚ್ ಹ್ಸಿಹ್ ವಿರುದ್ಧ ಪ್ರಾಬಲ್ಯ ಸಾಧಿಸಿದರು. ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯ ಸಾಧಿಸಿದರು.

ಇದಕ್ಕೂ ಮೊದಲು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಜಿನ್ ಜಾಂಗ್ ಅವರನ್ನು ಸೋಲಿಸಿದ್ದರು. ಆದರೆ, ಸೆಮಿಫೈನಲ್‌ನಲ್ಲಿ 0-5ರಿಂದ ಜಪಾನ್‌ನ ಮೋ ಕಿಯೂಕಾಗೆ ಮಣಿಸಿದ್ದರು.

ಭಾರತವು ಒಟ್ಟು ಎಂಟು ಪದಕಗಳನ್ನು ಗೆದ್ದಿದೆ. ಅದರಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಆರು ಕಂಚು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.