ADVERTISEMENT

ಮೋಟೊಜಿಪಿ: ಮಾರ್ಕೊ ಬೆಝೆಕಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2023, 16:14 IST
Last Updated 24 ಸೆಪ್ಟೆಂಬರ್ 2023, 16:14 IST
ಇಟಲಿಯ ಮಾರ್ಕೊ ಬೆಝೆಕಿ ಅವರ ಸಂಭ್ರಮ –ಪಿಟಿಐ ಚಿತ್ರ
ಇಟಲಿಯ ಮಾರ್ಕೊ ಬೆಝೆಕಿ ಅವರ ಸಂಭ್ರಮ –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಇಟಲಿಯ ಮಾರ್ಕೊ ಬೆಝೆಕಿ ಅವರು ಭಾನುವಾರ ನಡೆದ ಚೊಚ್ಚಲ ಇಂಡಿಯನ್‌ ಗ್ರ್ಯಾನ್‌ಪ್ರಿ ಮೋಟೊಜಿಪಿ ರೇಸ್‌ ಗೆದ್ದುಕೊಂಡರು.

ಬುದ್ಧ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ನಡೆದ ರೇಸ್‌ನಲ್ಲಿ ‘ಪೋಲ್‌ ಪೊಸಿಷನ್‌’ನಿಂದ ಸ್ಪರ್ಧೆ ಆರಂಭಿಸಿದ್ದ ‘ವಿಆರ್‌46’ ರೇಸಿಂಗ್‌ ತಂಡದ ಬೆಝೆಕಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ಬಳಿಕ ಲಯ ಕಂಡುಕೊಂಡು ಮೊದಲಿಗರಾಗಿ ಗುರಿ ತಲುಪಿದರು.

ಡುಕಾಟಿ ಪ್ರಮ್ಯಾಕ್‌ ತಂಡದ ರೈಡರ್‌ ಸ್ಪೇನ್‌ನ ಜಾರ್ಜ್‌ ಮಾರ್ಟಿನ್‌ ಎರಡನೇ ಸ್ಥಾನ ಪಡೆದರೆ, ಯಮಾಹ ತಂಡದ ರೈಡರ್‌ ಫ್ರಾನ್ಸ್‌ನ ಫ್ಯಾಬಿಯೊ ಕ್ವಾರ್ಟರಾರೊ ಮೂರನೆಯವರಾದರು.

ADVERTISEMENT

ಮಾರ್ಟಿನ್‌ ಮತ್ತು ವಿಶ್ವ ಚಾಂಪಿಯನ್‌ ಅಗಿರುವ ಇಟಲಿಯ ರೈಡರ್‌ ಫ್ರಾನ್ಸೆಸ್ಕೊ ಬನ್ಯಾಯಾ ಅವರು ಮೊದಲ ತಿರುವಿನಲ್ಲಿ ಬೆಝೆಕಿ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು.

ಆದರೆ ಅಲ್ಪ ಸಮಯದಲ್ಲೇ ಬೆಝೆಕಿ ಮತ್ತೆ ಮುನ್ನಡೆ ತಮ್ಮದಾಗಿಸಿಕೊಂಡರು. ಮೊದಲು ಬನ್ಯಾಯಾ ಅವರನ್ನು ಹಿಂದಿಕ್ಕಿದರೆ, ನಾಲ್ಕನೇ ತಿರುವಿನಲ್ಲಿ ಮಾರ್ಟಿನ್‌ ಅವರನ್ನೂ ಹಿಂದಕ್ಕೆ ತಳ್ಳಿದರು. ನಾಲ್ಕನೇ ತಿರುವಿನಲ್ಲಿ ಬೈಕ್‌, ಟ್ರ್ಯಾಕ್‌ನಿಂದ ಹೊರಕ್ಕೆ ಜಾರಿದ್ದು ಮಾರ್ಟಿನ್‌ಗೆ ಹಿನ್ನಡೆ ಉಂಟುಮಾಡಿತು.

ಒಮ್ಮೆ ಮುನ್ನಡೆ ಪಡೆದುಕೊಂಡ ಬಳಿಕ ಬೆಝೆಕಿ, ಕೊನೆಯವರೆಗೂ ಕಾಪಾಡಿಕೊಂಡರು. ಇತರ ಸ್ಪರ್ಧಿಗಳು ಗುರಿ ಮುಟ್ಟುವ ಎಂಟು ಸೆಕೆಂಡುಗಳಿಗೆ ಮುಂಚಿತವಾಗಿ ಸ್ಪರ್ಧೆ ಕೊನೆಗೊಳಿಸಿದರು. ಅವರು 36 ನಿ.59.157 ಸೆ.ಗಳಲ್ಲಿ ರೇಸ್‌ ಪೂರ್ಣಗೊಳಿಸಿದರು. ಈ ಋತುವಿನಲ್ಲಿ ಬೆಝೆಕಿ ಗೆದ್ದ ಮೂರನೇ ರೇಸ್‌ ಇದು.

ಎಂಟು ಬಾರಿಯ ವಿಶ್ವ ಚಾಂಪಿಯನ್‌ ಮಾರ್ಕ್‌ ಮಾರ್ಕ್ವೆಜ್ ಅವರು ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

12 ಲ್ಯಾಪ್‌ಗಳನ್ನೊಳಗೊಂಡ ಮೋಟೊ2 ರೇಸ್‌ನಲ್ಲಿ ಪೆಡ್ರೊ ಅಕೋಸ್ಟಾ ಅವರು ಚಾಂಪಿಯನ್‌ ಆದರು. ಟೋನಿ ಅರ್ಬೊಲಿನೊ ಮತ್ತು ಜೋ ರಾಬರ್ಟ್ಸ್‌ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.