ಡೆಹ್ರಾಡೂನ್: ದೆಹಲಿಯ ಕುಶಾಗ್ರ ರಾವತ್ ಅವರು ಉತ್ತರಾಖಂಡದ ಹಲ್‌ದ್ವಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಎರಡನೇ ದಿನವಾದ ಗುರುವಾರ ಈಜು ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.
ಮೊದಲ ದಿನ ಏಳು ಪದಕ ಗೆದ್ದು ಪಾರಮ್ಯ ಮೆರೆದಿದ್ದ ಕರ್ನಾಟಕ ತಂಡವು ಎರಡನೇ ದಿನ ಐದು ಪದಕಗಳನ್ನು ಜಯಿಸಿ, ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮಣಿಪುರ ಮತ್ತು ಮಹಾರಾಷ್ಟ್ರ ತಂಡಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ.
24 ವರ್ಷ ವಯಸ್ಸಿನ ರಾವತ್ ಪುರುಷರ 1500 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 15 ನಿಮಿಷ 37.79 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, 2023ರಲ್ಲಿ ತಾವೇ ನಿರ್ಮಿಸಿದ್ದ ದಾಖಲೆಯನ್ನು (15 ನಿ.38.73ಸೆ) ಸುಧಾರಿಸಿಕೊಂಡರು. ಮಧ್ಯಪ್ರದೇಶದ ಅದ್ವೈತ್ ಪೇಜ್ ಮತ್ತು ಗುಜರಾತ್‌ನ ಆರ್ಯನ್ ನೆಹ್ರಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.
ಪುರುಷರ 4x100 ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಕರ್ನಾಟಕದ ಆಕಾಶ್ ಮಣಿ, ವಿದಿತ್ ಶಂಕರ್, ಅನೀಶ್ ಎಸ್.ಗೌಡ ಮತ್ತು ಶ್ರೀಹರಿ ನಟರಾಜ್ ಅವರನ್ನು ಒಳಗೊಂಡ ತಂಡವು ಚಿನ್ನದ ಸಾಧನೆ ಮಾಡಿತು. ಒಲಿಂಪಿಯನ್ ಶ್ರೀಹರಿ ಅವರಿಗೆ ಇದು ಮೂರನೇ ಚಿನ್ನದ ಪದಕ. ಕರ್ನಾಟಕ ತಂಡವು 3 ನಿಮಿಷ 46.86 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿತು. ತಮಿಳುನಾಡು ಮತ್ತು ಮಹಾರಾಷ್ಟ್ರ ತಂಡಗಳು ಕ್ರಮವಾಗಿ ನಂತರದ ಸ್ಥಾನ ಪಡೆದವು.
ಮಹಿಳೆಯರ 4x100 ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಕಂಚು ಗೆದ್ದಿತ್ತು. ಸಿದ್ಧಿ ಜಿ ಶಾ, ವಿಹಿತಾ ನಯನಾ, ನೈಶಾ ಶೆಟ್ಟಿ ಮತ್ತು ಧಿನಿಧಿ ದೇಸಿಂಗು ಅವರನ್ನು ಒಳಗೊಂಡ ತಂಡವು 4 ನಿ,ಮಿಷ 31.62 ಸೆಕೆಂಡ್‌ನಲ್ಲಿ ಗುರಿ ಮುಟ್ಟಿತು. ಒಡಿಶಾ ಚಿನ್ನ ಗೆದ್ದರೆ, ಮಹಾರಾಷ್ಟ್ರ ಬೆಳ್ಳಿ ಜಯಿಸಿತು. ಒಲಿಂಪಿಯನ್ ಧಿನಿಧಿಗೆ ಇದು ನಾಲ್ಕನೇ ಪದಕ. ಬುಧವಾರ ಅವರು ಮೂರು ಚಿನ್ನ ಗೆದ್ದಿದ್ದರು.
ಪುರುಷರ 200 ಮೀ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ಮಣಿಕಂಠ ಎಲ್. ಅವರು 2 ನಿಮಿಷ21.78 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು. ತಮಿಳುನಾಡಿನ ಎಸ್.ಧನುಷ್ ಮತ್ತು ಜಾರ್ಖಂಡ್‌ನ ರಾಣಾ ಪ್ರತಾಪ್ ಕ್ರಮವಾಗಿ ಚಿನ್ನ ಮತ್ತು ಕಂಚು ತಮ್ಮದಾಗಿಸಿಕೊಂಡರು.
ಮಹಿಳೆಯರ ವಾಟರ್ ಪೋಲೊ ಸ್ಪರ್ಧೆಯಲ್ಲಿ ಕರ್ನಾಟಕದ ವನಿತೆಯರು 13–1ರಿಂದ ಒಡಿಶಾ ತಂಡವನ್ನು ಮಣಿಸಿದರು. ಆದರೆ, ಪುರುಷರ ತಂಡವು 4–20ರಿಂದ ಪಶ್ಚಿಮ ಬಂಗಾಳ ತಂಡ ಎದುರು ಸೋತಿತು.
ಫಲಿತಾಂಶ: ಪುರುಷರು: 1500 ಮೀ. ಫ್ರೀಸ್ಟೈಲ್: ಕುಶಾಗ್ರ ರಾವತ್ (ದೆಹಲಿ, ಕಾಲ: 15ನಿ.37.79ಸೆ)–1, ಅದ್ವೈತ್ ಪೇಜ್ (ಮಧ್ಯಪ್ರದೇಶ)–2, ಆರ್ಯ ನೆಹ್ರಾ (ಗುಜರಾತ್)–3.
200 ಮೀ. ಬ್ರೆಸ್ಟ್‌ಸ್ಟ್ರೋಕ್: ಎಸ್. ಧನುಷ್ (ತಮಿಳುನಾಡು, ಕಾಲ: 2ನಿ. 19.68ಸೆ)–1; ಮಣಿಕಂಠ ಎಲ್ .(ಕರ್ನಾಟಕ)–2, ರಾಣಾ ಪ್ರತಾಪ್ (ಜಾರ್ಖಂಡ್)–3.
4x100 ಮೀ ಮೆಡ್ಲೆ ರಿಲೆ: ಕರ್ನಾಟಕ (ಆಕಾಶ್ ಮಣಿ, ವಿದಿತ್ ಶಂಕರ್, ಅನೀಶ್ ಎಸ್. ಗೌಡ, ಶ್ರಿಹರಿ ನಟರಾಜ್, ಕಾಲ: 3ನಿ.46.86ಸೆ)– 1, ತಮಿಳುನಾಡು–2, ಮಹಾರಾಷ್ಟ್ರ–3.
ಮಹಿಳೆಯರು: 400 ಮೀ. ಮೆಡ್ಲೆ: ಸಾನ್ವಿ ದೇಶವಾಲ್ (ಮಹಾರಾಷ್ಟ್ರ, ಕಾಲ: 5ನಿ. 08.49ಸೆ)–1, ಶ್ರೀನೀತಿ ನೇಟೆಸನ್ (ತಮಿಳುನಾಡು)–2, ಭವ್ಯಾ ಸಚ್‌ದೇವ (ದೆಹಲಿ)–3.
200 ಮೀ. ಬ್ರೆಸ್ಟ್‌ಸ್ಟ್ರೋಕ್: ಹರ್ಷಿತಾ ಜಯರಾಮ್ (ಕೇರಳ, ಕಾಲ: 2ನಿ.42.38ಸೆ)–1, ಶ್ರೀನೀತಿ ನೇಟೆಸನ್ (ತಮಿಳುನಾಡು)–2, ದಿವ್ಯಾಂಕಾ ಪ್ರಧಾನ್ (ಒಡಿಶಾ)–3.
4x100 ಮೀ ಮೆಡ್ಲೆ ರಿಲೆ: ಒಡಿಶಾ (ಕಾಲ: 4ನಿ. 30.09ಸೆ)–1, ಮಹಾರಾಷ್ಟ್ರ–2; ಕರ್ನಾಟಕ– 3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.