ADVERTISEMENT

ಕೊರಿಯ ಜೂನಿಯರ್‌ ಓಪನ್‌ ಬ್ಯಾಡ್ಮಿಂಟನ್‌: ಲುವಾಂಗ್‌ಗೆ ಕೊರಿಯಾ ಗರಿ

ಸತೀಶ್‌ ಕುಮಾರ್‌ಗೆ ಮೂರನೇ ಸ್ಥಾನ

ಪಿಟಿಐ
Published 2 ನವೆಂಬರ್ 2019, 19:30 IST
Last Updated 2 ನವೆಂಬರ್ 2019, 19:30 IST
ಪ್ರಶಸ್ತಿಯೊಂದಿಗೆ ಮೈಸ್ನಮ್‌ ಮೀರಬಾ ಲುವಾಂಗ್‌ ಹಾಗೂ ಸತೀಶ್‌ಕುಮಾರ್‌– ಟ್ವಿಟರ್‌ ಚಿತ್ರ
ಪ್ರಶಸ್ತಿಯೊಂದಿಗೆ ಮೈಸ್ನಮ್‌ ಮೀರಬಾ ಲುವಾಂಗ್‌ ಹಾಗೂ ಸತೀಶ್‌ಕುಮಾರ್‌– ಟ್ವಿಟರ್‌ ಚಿತ್ರ   

ನವದೆಹಲಿ: ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ಭಾರತದ ಮೈಸ್ನಮ್‌ ಮೀರಬಾ ಲುವಾಂಗ್‌ ಅವರು ಶನಿವಾರ ಕೊರಿಯಾ ಜೂನಿಯರ್‌ ಓಪನ್‌ ಬ್ಯಾಡ್ಮಿಂಟನ್‌ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಕೊರಿಯಾದ ಮಿರ್‌ ಯಾಂಗ್‌ನಲ್ಲಿ ನಡೆದ ಟೂರ್ನಿಯ 19 ವರ್ಷದೊಳಗಿನವರ ಫೈನಲ್‌ ಪಂದ್ಯದಲ್ಲಿ ಅವರು ಕೊರಿಯಾ ಆಟಗಾರ ಲೀ ಹಾಕ್‌ ಜೂ ಅವರನ್ನು 21–10, 21–13 ಗೇಮ್‌ಗಳಿಂದ ಸೋಲಿಸಿದರು. ಅಗ್ರ ಶ್ರೇಯಾಂಕದ ಮಣಿಪುರದ ಆಟಗಾರನಿಗೆ 15ನೇ ಶ್ರೇಯಾಂಕದ ಲೀ ಅವರು 36 ನಿಮಿಷಗಳಲ್ಲಿ ಶರಣಾದರು.

ಈ ವಿಭಾಗದ ಮೂರನೇ ಸ್ಥಾನವು ಭಾರತದ ಇನ್ನೊಬ್ಬ ಶಟ್ಲರ್‌ ಸತೀಶ್‌ಕುಮಾರ್‌ ಕರುಣಾಕರಣ್‌ ಪಾಲಾಯಿತು. ಶುಕ್ರವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಸತೀಶ್‌, ಲುವಾಂಗ್‌ ಅವರಿಗೇ 16–21, 22–24ರಿಂದ ಸೋತಿದ್ದರು.

ADVERTISEMENT

ಲುವಾಂಗ್ ವಿಶ್ವ ಜೂನಿಯರ್‌ ರ‍್ಯಾಂಕಿಂಗ್‌ನಲ್ಲಿ ಸದ್ಯ 9ನೇ ಸ್ಥಾನದಲ್ಲಿದ್ದಾರೆ. ಈ ವಾರ ಆಡಿರುವ ಆರು ಪಂದ್ಯಗಳಲ್ಲಿ ಅವರು ಒಂದು ಗೇಮ್‌ ಮಾತ್ರ ಕಳೆದುಕೊಂಡಿದ್ದಾರೆ. ವರ್ಷದಲ್ಲಿ ಲುವಾಂಗ್‌ ಗೆದ್ದಿರುವ ಮೂರನೇ ಪ್ರಶಸ್ತಿ ಇದು. ರಷ್ಯನ್‌ ಜೂನಿಯರ್‌ ವೈಟ್‌ ನೈಟ್‌ ಮತ್ತು ಇಂಡಿಯಾ ಜೂನಿಯರ್‌ ಇಂಟರ್‌ನ್ಯಾಷನಲ್‌ ಟೂರ್ನಿಗಳಲ್ಲಿ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.