ADVERTISEMENT

ಮತ್ತೆ ಬಾಕ್ಸಿಂಗ್‌ ರಿಂಗ್‌ಗೆ ಟೈಸನ್‌

ಪ್ರದರ್ಶನ ಪಂದ್ಯವೊಂದರಲ್ಲಿ ರಾಯ್‌ ಜೊನ್ಸ್ ಎದುರು ಸೆಣಸು

ಏಜೆನ್ಸೀಸ್
Published 30 ಅಕ್ಟೋಬರ್ 2020, 12:22 IST
Last Updated 30 ಅಕ್ಟೋಬರ್ 2020, 12:22 IST
ಮೈಕ್ ಟೈಸನ್‌–ಪಿಟಿಐ ಚಿತ್ರ
ಮೈಕ್ ಟೈಸನ್‌–ಪಿಟಿಐ ಚಿತ್ರ   

ಲಾಸ್‌ ಏಂಜಲೀಸ್‌:ಅಮೆರಿಕದ ದಿಗ್ಗಜ ಮೈಕ್ ಟೈಸನ್‌ ಹಾಗೂ ಹಿರಿಯ ಪಟು ರಾಯ್‌ ಜೋನ್ಸ್ ಜೂನಿಯರ್‌ ಅವರು ಬಾಕ್ಸಿಂಗ್ ರಿಂಗ್‌ನಲ್ಲಿ ಮತ್ತೆ ಮುಖಾಮುಖಿಯಾಗಲಿದ್ದಾರೆ. ಕ್ಯಾಲಿಫೋರ್ನಿಯಾ ಅಥ್ಲೆಟಿಕ್ಸ್ ಸಮಿತಿಯು ಪ್ರದರ್ಶನ ಪಂದ್ಯವೊಂದರಲ್ಲಿ ಸ್ಪರ್ಧಿಸಲು ಇಬ್ಬರಿಗೂ ಅನುಮತಿ ನೀಡಿದೆ.

ನವೆಂಬರ್‌ನಲ್ಲಿ ನಡೆಯುವ ಈ ಹಣಾಹಣಿಯನ್ನು ತಾವು ಗಂಭೀರವಾಗಿ ತೆಗೆದುಕೊಂಡಿರುವುದಾಗಿ 50ರ ಪ್ರಾಯ ದಾಟಿರುವ ಮಾಜಿ ವೃತ್ತಿಪರ ಬಾಕ್ಸರ್‌ಗಳಾದ ಟೈಸನ್‌ ಹಾಗೂ ರಾಯ್‌ ಹೇಳಿದ್ದಾರೆ.

‘ನಿಜವಾದ ಸ್ಪರ್ಧೆ ಇದು. ನಾನು ರಾಯ್ ಜೊತೆ ಸೆಣಸಲು ನಾನು ಸಿದ್ಧವಾಗಿದ್ದೇನೆ. ರಾಯ್‌ ಕೂಡ ಆಗಮಿಸುವ ವಿಶ್ವಾಸವಿದೆ‘ ಎಂದು ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಟೈಸನ್‌ ನುಡಿದರು.

ADVERTISEMENT

‘ನವೆಂಬರ್‌ 28ರಂದು ಲಾಸ್‌ ಏಂಜಲೀಸ್‌ನ ಸ್ಟ್ಯಾಪಲ್ಸ್ ಸೆಂಟರ್‌ನಲ್ಲಿ 51 ವರ್ಷದ ಜೋನ್ಸ್ ವಿರುದ್ಧದ ಎಂಟು ಸುತ್ತಿನ ಸ್ಪರ್ಧೆಗೆ 54 ವರ್ಷದ ಮೈಕ್ ಟೈಸನ್‌ ಸಿದ್ಧವಾಗಿದ್ದಾರೆ‘ ಎಂದು ಬೌಟ್‌ನ ಸಂಘಟಕರು ಹೇಳಿದ್ದಾರೆ.

ಟೈಸನ್‌ ಕೊನೆಯ ಬಾರಿ ಕಣಕ್ಕಿಳಿದಿದ್ದು 2005ರಲ್ಲಿ. ಜೋನ್ಸ್ 2018ರ ಫೆಬ್ರುವರಿಯಲ್ಲಿ ಬೌಟ್‌ವೊಂದರಲ್ಲಿ ಪಾಲ್ಗೊಂಡಿದ್ದರು.

‘ಟೈಸನ್‌ ಜೊತೆ ನಡೆಯುವ ಯಾವುದೇ ಬೌಟ್‌ ಕೇವಲ ಪ್ರದರ್ಶನ ಪಂದ್ಯದಂತಿರುವುದಿಲ್ಲ. ಗಂಭೀರವಾಗಿಯೇ ಇರುತ್ತದೆ‘ ಎಂದು ಜೋನ್ಸ್ ಹೇಳಿದ್ದಾರೆ.

ಸ್ಪರ್ಧೆಯ ಸಂದರ್ಭದಲ್ಲಿ ಟೈಸನ್‌ ಹಾಗೂ ಜೋನ್ಸ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಬಾರದು. ಹಾಗೊಂದು ವೇಳೆ ಏನಾದರೂ ಸಂಭವಿಸಿದರೆ ಬೌಟ್‌ ನಿಲ್ಲಿಸಲು ಯೋಜಿಸಲಾಗಿದೆ‘ ಎಂದು ಸಂಘಟಕರು ಹೇಳಿದ್ದಾರೆ.

1987ರಿಂದ 1990ರವರೆಗೆ ಟೈಸನ್‌ ಅವರು ಹೆವಿವೇಟ್‌ ವಿಶ್ವಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. ಜೋನ್ಸ್ ನಾಲ್ಕು ತೂಕ ವಿಭಾಗಗಳಲ್ಲಿ ಹಲವು ಬಾರಿ ವಿಶ್ವಚಾಂಪಿಯನ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.