ADVERTISEMENT

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿಗೆ ಅಮೆರಿಕದಲ್ಲಿ ತರಬೇತಿ

ವಿಸಾ ಸಮಸ್ಯೆಯಿಂದ ಐವರ ಪ್ರಯಾಣ ಅನಿಶ್ಚಿತ; ಮುಖ್ಯ ಕೋಚ್ ಪ್ರಯಾಣ

ಪಿಟಿಐ
Published 18 ಮಾರ್ಚ್ 2022, 2:34 IST
Last Updated 18 ಮಾರ್ಚ್ 2022, 2:34 IST
ಮೀರಾಬಾಯಿ ಚಾನು –ಪಿಟಿಐ ಚಿತ್ರ
ಮೀರಾಬಾಯಿ ಚಾನು –ಪಿಟಿಐ ಚಿತ್ರ   

ನವದೆಹಲಿ: ಭಾರತದ ವೇಟ್‌ ಲಿಫ್ಟರ್‌, ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚಾನು ಅವರು ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ಗಾಗಿ ಅಮೆರಿಕದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಈ ವಾರ ಆರಂಭವಾಗಲಿರುವ ಅಭ್ಯಾಸ ಒಂದು ತಿಂಗಳು ಪೂರ್ತಿ ನಡೆಯಲಿದೆ.

ಮೀರಾಬಾಯಿ ಅವರಿಗೆ ತರಬೇತಿ ನೀಡುವುದಕ್ಕಾಗಿ ಭಾರತ ವೇಟ್‌ಲಿಫ್ಟಿಂಗ್ ಕೋಚ್‌ ವಿಜಯ್ ಶರ್ಮಾ ಗುರುವಾರ ಅಮೆರಿಕಕ್ಕೆ ಪ್ರಯಾಣ ಮಾಡಿದ್ದಾರೆ. ‘ನಾಲ್ಕರಿಂದ ಐದು ವಾರಗಳ ತರಬೇತಿಗೆ ಸಿದ್ಧತೆ ನಡೆದಿದೆ. ಈ ಅವಧಿ ಹೆಚ್ಚಾಗುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿದ್ದಾರೆ.

‘ಏಪ್ರಿಲ್ ತಿಂಗಳ ಕೊನೆಯ ವಾರದ ವರೆಗೆ ಅಭ್ಯಾಸ ನಡೆಸುವುದು ಸದ್ಯದ ಯೋಜನೆ. ಅಲ್ಲಿನ ವಾತಾವರಣವನ್ನು ನೋಡಿಕೊಂಡು ದಿನಾಂಕವನ್ನು ಇನ್ನಷ್ಟು ಮುಂದುವರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು’ ಎಂದು ವಿಜಯ್ ವಿವರಿಸಿದರು.

ADVERTISEMENT

ಬಲಭುಜ ಮತ್ತು ಬೆನ್ನೆಲುಬಿನ ನೋವಿನಿಂದ ಬಳಲುತ್ತಿದ್ದದು ಮೀರಾಬಾಯಿ ಅವರ ಸ್ನ್ಯಾಚ್ ಸಾಧನೆಗೆ ಅಡ್ಡಿಯಾಗಿತ್ತು. ಮಾಜಿ ವೇಟ್‌ಲಿಫ್ಟರ್, ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್ ಅಮೆರಿಕದ ಆ್ಯರನ್ ಹಾರ್ಶಿಗ್ ಅವರು ಈ ಸಮಸ್ಯೆಯನ್ನು ಪರಿಹರಿಸಿದ್ದಾರೆ.

ಐವರಿಗೆ ವಿಸಾ ಸಮಸ್ಯೆ
ಚಾನು ಅವರ ಜೊತೆ ಇತರ ಐವರು ವೇಟ್‌ಲಿಫ್ಟರ್‌ಗಳು ಕೂಡ ತರಬೇತಿಗೆ ಹಾಜರಾಗಬೇಕಾಗಿತ್ತು. ಆದರೆ ವಿಸಾ ಸಮಸ್ಯೆಯಿಂದಾಗಿ ಅವರ ಪ್ರಯಾಣ ಇನ್ನೂ ನಿಗದಿಯಾಗಲಿಲ್ಲ. ಜೆರೆಮಿ ಲಾಲ್‌ರಿನ್ನುವಾಂಗ, ಅಚಿಂತಾ ಶೆವುಲಿ, ಸಂಕೇತ್ ಸಾಗರ್‌, ಬಿಂದ್ಯಾರಾಣಿ ದೇವಿ ಮತ್ತು ಜಿಲಿ ದಲಬೆಹೆರ ಅವರು ವಿಸಾ ಸಮಸ್ಯೆ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

ಜುಲೈ 28ರಿಂದ ಆಗಸ್ಟ್ 8ರ ವರೆಗೆ ಬರ್ಮಿಂಗ್‌ಹ್ಯಾಂನಲ್ಲಿ ಕಾಮನ್ವೆಲ್ತ್ ಗೇಮ್ಸ್ ನಡೆಯಲಿದೆ. ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಕಳೆದ ತಿಂಗಳಲ್ಲಿ ನಡೆದ ಸಿಂಗಪುರ ಓಪನ್‌ನಲ್ಲಿ ಕಾಮನ್ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. 49 ಕೆಜಿ ಅಥವಾ 55 ಕೆಜಿ ವಿಭಾಗದಲ್ಲಿ ಮೀರಾಬಾಯಿ ಸ್ಪರ್ಧಿಸಲಿದ್ದಾರೆ. 49 ಕೆಜಿಯಲ್ಲಿ ಅವರು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮೀರಾಬಾಯಿ ಎರಡು ಬಾರಿ ಪದಕ ಗೆದ್ದುಕೊಂಡಿದ್ದಾರೆ. 2014ರಲ್ಲಿ ಗ್ಲಾಸ್ಗೊದಲ್ಲಿ ಬೆಳ್ಳಿ ಮತ್ತು 2018ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನ ಗಳಿಸಿದ್ದರು. ಈ ಬಾರಿ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು ಇದೆ. ಕಾಮನ್ವೆ‌ಲ್ತ್ ಗೇಮ್ಸ್‌ನ ಒಂದು ತಿಂಗಳ ನಂತರ ಏಷ್ಯನ್ ಗೇಮ್ಸ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.