ADVERTISEMENT

ಒಲಿಂಪಿಕ್ಸ್: ಮೀರಾಬಾಯಿ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಳ

ಟೋಕಿಯೊ ಕೂಟದಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ನಿರ್ಧಾರ

ಪಿಟಿಐ
Published 6 ಏಪ್ರಿಲ್ 2021, 12:05 IST
Last Updated 6 ಏಪ್ರಿಲ್ 2021, 12:05 IST
ಮೀರಾಬಾಯಿ ಚಾನು–ಪಿಟಿಐ ಚಿತ್ರ
ಮೀರಾಬಾಯಿ ಚಾನು–ಪಿಟಿಐ ಚಿತ್ರ   

ನವದೆಹಲಿ: ಜಪಾನ್‌ನ ಟೋಕಿಯೊದಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ಉತ್ತರ ಕೊರಿಯಾ ಮಂಗಳವಾರ ನಿರ್ಧರಿಸಿದೆ. ಇದರೊಂದಿಗೆ ಭಾರತದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರು ಕೂಟದಲ್ಲಿ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಈ ವರ್ಷದ ಜುಲೈ 23ರಿಂದ ಆಗಸ್ಟ್ 8ರವರೆಗೆ ಒಲಿಂಪಿಕ್ಸ್ ನಡೆಯಬೇಕಿದ್ದು, ಕೋವಿಡ್‌–19 ಪಿಡುಗಿನಿಂದ ತನ್ನ ಅಥ್ಲೀಟ್‌ಗಳನ್ನು ರಕ್ಷಿಸಿಕೊಳ್ಳಲು ಉತ್ತರ ಕೊರಿಯಾ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದೆ.

ಈ ಹಿಂದೆ ವಿಶ್ವ ಚಾಂಪಿಯನ್ ಆಗಿದ್ದ ಮೀರಾಬಾಯಿ, ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ ಲೆಕ್ಕಾಚಾರದ ಅನ್ವಯ, ಮಹಿಳೆಯರ 49 ಕೆಜಿ ವಿಭಾಗದಲ್ಲಿ ಟೋಕಿಯೊ ಕ್ರೀಡಾಕೂಟದ ಅರ್ಹತಾ ಕ್ರಮಾಂಕದಲ್ಲಿ 3869.8038 ರೋಬಿ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ADVERTISEMENT

ಅವರ ಹತ್ತಿರದ ಪ್ರತಿಸ್ಪರ್ಧಿ, ಉತ್ತರ ಕೊರಿಯಾದ ರಿ ಸಾಂಗ್ ಗಮ್, 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 204 ಕೆ.ಜಿ. ಎತ್ತುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದರು. ಮೀರಾ (201 ಕೆ.ಜಿ.) ಭಾರ ಎತ್ತಿದ್ದರು. ರಿ ಸಾಂಗ್ ಸದ್ಯ 4209.4909 ಪಾಯಿಂಟ್‌ಗಳೊಂದಿಗೆ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಹೀಗಾಗಿ ಒಂದು ವೇಳೆ ಉತ್ತರ ಕೊರಿಯಾ ಕೂಟದಿಂದ ಹಿಂದೆ ಸರಿಯುವ ತನ್ನ ನಿರ್ಧಾರಕ್ಕೆ ಅಂಟಿಕೊಂಡರೆ, ಮೀರಾ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆಯಲಿದ್ದಾರೆ.

‘ಉತ್ತರ ಕೊರಿಯಾ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವ ಸುದ್ದಿ ಕೇಳಿ ನಮಗೆ ಸಂತೋಷವಾಗಿದೆ. ಆದರೆ, ಪ್ರಾಮಾಣಿಕವಾಗಿ ಚೀನಾದೊಂದಿಗೆ ಸ್ಪರ್ಧಿಸುವುದರತ್ತ ನಮ್ಮ ಚಿತ್ತ ಇತ್ತು‘ ಎಂದು ರಾಷ್ಟ್ರೀಯ ತರಬೇತುದಾರ ವಿಜಯ್ ಶರ್ಮಾ ತಿಳಿಸಿದ್ದಾರೆ.

ಸದ್ಯದ ಅರ್ಹತಾ ರ‍್ಯಾಂಕಿಂಗ್ಸ್‌ನ ಅಗ್ರ ಐವರ ಪಟ್ಟಿಯಲ್ಲಿ ಚೀನಾದ ಮೂವರು ವೇಟ್‌ಲಿಫ್ಟರ್‌ಗಳಿದ್ದಾರೆ. ಒಂದು ತೂಕ ವಿಭಾಗದಲ್ಲಿ ಒಂದು ದೇಶದಿಂದ ಒಬ್ಬರಿಗೆ ಮಾತ್ರ ಸ್ಪರ್ಧಿಸುವ ಅವಕಾಶ ಇದೆ. ಹೀಗಾಗಿ ಸಹಜವಾಗಿಯೇ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಎರಡನೇ ಶ್ರೇಷ್ಠ ಸ್ಪರ್ಧಿ ಆಗಿ ಹೊರಹೊಮ್ಮಲಿದ್ದಾರೆ. ಮೊದಲ ಸ್ಥಾನದಲ್ಲಿ ಚೀನಾದ ವೇಟ್‌ಲಿಫ್ಟರ್‌ ಹೋ ಜಿಹುಯಿ ಇದ್ದಾರೆ.

ಮೀರಾಬಾಯಿ, ಏಪ್ರಿಲ್ 16 ರಿಂದ 25ರವರೆಗೆ ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆಯಲಿರುವ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.