ADVERTISEMENT

ಮಿಜೋರಾಂ ಹಾಕಿ ತಂಡಕ್ಕೆ ಲಾಲ್‌ರೆಮ್ಸಿಯಾಮಿ ಕೋಚ್‌

ಪಿಟಿಐ
Published 20 ಆಗಸ್ಟ್ 2021, 11:54 IST
Last Updated 20 ಆಗಸ್ಟ್ 2021, 11:54 IST
ಲಾಲ್‌ರೆಮ್ಸಿಯಾಮಿ –ರಾಯಿಟರ್ಸ್ ಚಿತ್ರ
ಲಾಲ್‌ರೆಮ್ಸಿಯಾಮಿ –ರಾಯಿಟರ್ಸ್ ಚಿತ್ರ   

ಐಜ್ವಾಲ್‌: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತ ಮಹಿಳಾ ಹಾಕಿ ತಂಡದ ಸದಸ್ಯೆ ಲಾಲ್‌ರೆಮ್ಸಿಯಾಮಿ ಅವರನ್ನು ಮಿಜೋರಾಂ ಸರ್ಕಾರವು ರಾಜ್ಯ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.

ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳೆಯರ ತಂಡದವರು ಸೆಮಿಫೈನಲ್ ಪ್ರವೇಶಿಸಿದ ಐತಿಹಾಸಿಕ ಸಾಧನೆ ಮಾಡಿದ್ದರು. ಕಂಚಿನ ಪದಕದ ಪಂದ್ಯದಲ್ಲಿ ಸೋತರೂ ತಂಡದ ಆಟಗಾರ್ತಿಯರ ಸಾಮರ್ಥ್ಯಕ್ಕೆ ದೇಶದೆಲ್ಲೆಡೆಯಿಂದ ಮೆಚ್ಚುಗೆಯ ನುಡಿಗಳು ಕೇಳಿಬಂದಿದ್ದವು. ಲಾಲ್‌ರೆಮ್ಸಿಯಾಮಿ, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮಿಜೋರಾಂನ ಮೊದಲ ಮಹಿಳೆ ಆಗಿದ್ದಾರೆ.

ಹೀಗಾಗಿ ಅವರಿಗೆ ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆಯಲ್ಲಿ ‘ಎ’ ದರ್ಜೆಯ ಉದ್ಯೋಗ ನೀಡಲು ನಿರ್ಧರಿಸಲಾಗಿತ್ತು. ಇದು, ಸಹಾಯಕ ನಿರ್ದೇಶಕರ ಮಟ್ಟದ ಹುದ್ದೆಯಾಗಿದೆ. ಲಾಲ್‌ರೆಮ್ಸಿಯಾಮಿ ಅವರಿಗೆ ಅವರ ತವರು ಪಟ್ಟಣವಾದ ಕೊಲಾಸಿಬ್‌ನಲ್ಲಿ ಮನೆ ನಿರ್ಮಿಸಲು ಜಾಗವನ್ನೂ ಸರ್ಕಾರ ನೀಡಿದೆ.

ADVERTISEMENT

ಕೋಚ್ ಆಗಿ ನೇಮಕ ಮಾಡಿರುವ ವಿಷಯವನ್ನು ಮುಖ್ಯಮಂತ್ರಿ ಜೊರಾಮ್‌ತಾಂಗ ಅವರು ಅಧಿಕೃತ ಟ್ವಿಟರ್ ಖಾತೆಯಲ್ಲಿ ಗುರುವಾರ ರಾತ್ರಿ ಬಹಿರಂಗ ಮಾಡಿದ್ದಾರೆ. ಒಲಿಂಪಿಕ್ಸ್‌ನಿಂದ ವಾಪಸ್ ಆದ ತಕ್ಷಣ ಲಾಲ್‌ರೆಮ್ಸಿಯಾಮಿ ಅವರಿಗೆ ಸರ್ಕಾರ ₹ 25 ಲಕ್ಷವನ್ನು ನೀಡಿತ್ತು. ಜೂನ್ 24ರಂದು ಅವರ ತಾಯಿ ಲಾಲ್‌ಜರ್ಮಾವಿ ಅವರಿಗೆ ₹ 10 ಲಕ್ಷ ನೀಡಲಾಗಿತ್ತು.

ಲಾಲ್‌ರೆಮ್ಸಿಯಾಮಿ ಆಗಸ್ಟ್ 25ರಂದು ಮಿಜೋರಾಂಗೆ ಬರಲಿದ್ದು ಐಜ್ವಾಲ್‌ನ ವನಾಪ ಸಭಾಂಗಣದಲ್ಲಿ 26ರಂದು ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ರಾಜ್ಯ ಕ್ರೀಡಾ ಇಲಾಖೆಯ ನಿರ್ದೇಶಕ ಲಾಲ್‌ಸಾಂಗ್ಲಿಯಾನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.