ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್‌: ವಿಕ್ಟರ್‌ ಅಕ್ಸೆಲ್ಸೆನ್‌ ಚಾಂಪಿಯನ್‌

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್‌: ಕೆಂಟೊ ಮೊಮೊಟಾಗೆ ಹೀನಾಯ ಸೋಲು

ಏಜೆನ್ಸೀಸ್
Published 3 ಜುಲೈ 2022, 16:15 IST
Last Updated 3 ಜುಲೈ 2022, 16:15 IST
ವಿಕ್ಟರ್ ಅಕ್ಸೆಲ್ಸೆನ್‌ ಪ್ರಶಸ್ತಿ ಸಂಭ್ರಮ– ಎಎಫ್‌ಪಿ ಚಿತ್ರ
ವಿಕ್ಟರ್ ಅಕ್ಸೆಲ್ಸೆನ್‌ ಪ್ರಶಸ್ತಿ ಸಂಭ್ರಮ– ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ: ಅಮೋಘ ಆಟವಾಡಿದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್‌ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಹಣಾಹಣಿಯಲ್ಲಿ, ಒಲಿಂಪಿಕ್ ಚಾಂಪಿಯನ್‌ ಅಕ್ಸೆಲ್ಸೆನ್‌21-4, 21-7ರಿಂದ ಜಪಾನ್‌ನ ಕೆಂಟೊ ಮೊಮೊಟಾ ಅವರಿಗೆ ಸೋಲುಣಿಸಿದರು.

ಅಪಘಾತದಿಂದ ಚೇತರಿಸಿಕೊಂಡ ಎರಡು ವರ್ಷಗಳ ಬಳಿಕ ಮೊದಲ ಬಾರಿ ಮಲೇಷ್ಯಾದಲ್ಲಿ ಆಡಿದ್ದ ಕೆಂಟೊ ಮೊಮೊಟಾ ಅವರಿಗೆ ಗೆಲುವು ಒಲಿಯಲಿಲ್ಲ. 34 ನಿಮಿಷಗಳ ಹಣಾಹಣಿಯಲ್ಲಿಜಪಾನ್‌ನ ಆಟಗಾರ ಹೀನಾಯ ಸೋಲು ಕಂಡರು.

ADVERTISEMENT

2020ರಲ್ಲಿ ಇಲ್ಲಿ ನಡೆದ ಕಾರು ಅಪಘಾತದಲ್ಲಿಮೊಮೊಟಾ ತೀವ್ರ ಗಾಯಗೊಂಡಿದ್ದರು.

ಪ್ರಶಸ್ತಿ ಸುತ್ತಿನ ಸೆಣಸಾಟವು ಸಂಪೂರ್ಣ ಏಕಪಕ್ಷೀಯವಾಗಿತ್ತು. ಡೆನ್ಮಾರ್ಕ್‌ ಆಟಗಾರನ ಚುರುಕಿನ ಸ್ಮ್ಯಾಷ್‌ಗಳು ಮೊಮೊಟಾ ಅವರನ್ನು ಕಂಗೆಡಿಸಿದವು. ಹಲವು ಸ್ವಯಂಕೃತ ತಪ್ಪುಗಳೂ ಅವರ ಸೋಲಿಗೆ ಕಾರಣವಾದವು.

ಅಕ್ಸೆಲ್ಸೆನ್‌ ಅವರಿಗೆ ಈ ವರ್ಷದಲ್ಲಿ ಒಲಿದ ಐದನೇ ಪ್ರಶಸ್ತಿ ಇದು. ಈ ಮೊದಲು ಆಲ್‌ ಇಂಗ್ಲೆಂಡ್‌, ಯೂರೋಪಿಯನ್ ಚಾಂಪಿಯನ್‌ಷಿಪ್‌ ಮತ್ತು ಇಂಡೊನೇಷ್ಯಾದಲ್ಲಿ ನಡೆದ ಎರಡು ಟೂರ್ನಿಗಳಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.

ಇಂತನನ್‌ಗೆ ಮಹಿಳಾ ಕಿರೀಟ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂತನನ್‌ ಪ್ರಶಸ್ತಿ ಗೆದ್ದರು. ಜಿದ್ದಾಜಿದ್ದಿನ ಫೈನಲ್‌ನಲ್ಲಿ ಅವರು21-15, 13-21, 21-16ರಿಂದ ಚೀನಾದ ಚೆನ್‌ ಯು ಫೆಯ್ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.