ADVERTISEMENT

ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಅಂಜುಮ್‌, ಅಪೂರ್ವಿ

ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳಿಗೆ ಪದಕ

ಪಿಟಿಐ
Published 3 ಸೆಪ್ಟೆಂಬರ್ 2018, 12:40 IST
Last Updated 3 ಸೆಪ್ಟೆಂಬರ್ 2018, 12:40 IST
ಅಂಜುಮ್‌ ಮೌದ್ಗಿಲ್‌
ಅಂಜುಮ್‌ ಮೌದ್ಗಿಲ್‌   

ಚಾಂಗ್ವಾನ್‌: ಭಾರತದ ಶೂಟರ್‌ಗಳಾದ ಅಂಜುಮ್‌ ಮೌದ್ಗಿಲ್‌ ಹಾಗೂ ಅಪೂರ್ವಿ ಚಾಂಡೇಲಾ ಅವರು 2020ರ ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ಸೋಮವಾರ ನಡೆದ ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಷನ್‌ (ಐಎಸ್‌ಎಸ್‌ಎಫ್‌) ಆಯೋಜಿಸಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಂಜುಮ್‌ ಹಾಗೂ ಅಪೂರ್ವಿ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.

ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ನ ಫೈನಲ್ಸ್‌ನಲ್ಲಿ ಅಂಜುಮ್‌ 248.4 ಸ್ಕೋರ್‌ ಗಳಿಸಿದರು. ದಕ್ಷಿಣ ಕೊರಿಯಾದ ಹನಾ ಇಮ್‌ 251.1 ಸ್ಕೋರ್‌ನೊಂದಿಗೆ ಚಿನ್ನದ ಸಾಧನೆ ಮಾಡಿದರು. ಕೊರಿಯಾದವರೇ ಆದ ಯುನ್‌ಹಿ ಜಂಗ್‌ 228 ಸ್ಕೋರ್‌ ದಾಖಲಿಸಿ ಕಂಚಿನ ಪದಕ ಜಯಿಸಿದರು.

ADVERTISEMENT

ಅಪೂರ್ವಿ, 207 ಸ್ಕೋರ್‌ ದಾಖಲಿಸಿ ನಾಲ್ಕನೇ ಸ್ಥಾನ ಪಡೆದರು.ಅರ್ಹತಾ ಸುತ್ತಿನಲ್ಲಿ ಮೌದ್ಗಿಲ್‌ ಹಾಗೂ ಚಾಂಡೇಲಾ ಅವರು ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನ ಪಡೆದಿದ್ದರು.

ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಲು ಯಶಸ್ವಿಯಾಗಿದ್ದರೂ, ಆಯ್ಕೆಗೆ ಸಂಬಂಧಿಸಿದಂತೆ ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಅದಕ್ಕಾಗಿ ಅಂತರರಾಷ್ಟ್ರೀಯ ಟೂರ್ನಿಗಳು ಹಾಗೂ ಆಯ್ಕೆ ಟ್ರಯಲ್ಸ್‌ನಲ್ಲಿ ಈ ಇಬ್ಬರೂ ಶೂಟರ್‌ಗಳು ಗಳಿಸುವ ಸ್ಕೋರ್‌ ಅನ್ನು ಎನ್‌ಆರ್‌ಎಐ ಪರಿಗಣಿಸಲಿದೆ.

ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ನ ಫೈನಲ್ಸ್‌ನಲ್ಲಿ ದೀಪಕ್‌ ಕುಮಾರ್‌ ಅವರು ಆರನೇ ಸ್ಥಾನ ಪಡೆದರು.

ಭಾನುವಾರ ನಡೆದ ಜೂನಿಯರ್‌ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಅರ್ಜುನ್‌ ಸಿಂಗ್‌ ಖೀಮಾ ಹಾಗೂ ಗೌರವ್‌ ಅವರು ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.