ADVERTISEMENT

ಕಬಡ್ಡಿಯಲ್ಲಿ ಸತತ 8 ಬಾರಿ ರಾಜ್ಯ ಮಟ್ಟಕ್ಕೆ: ಬಹುಮುಖ ಕ್ರೀಡಾ ಪ್ರತಿಭೆ ಗುಣಸಾಗರ

ಆಲ್‌ರೌಂಡ್‌ ಆಟಕ್ಕೆ ಹೆಸರು

ಕೆ.ಸೋಮಶೇಖರ
Published 26 ಮಾರ್ಚ್ 2019, 20:00 IST
Last Updated 26 ಮಾರ್ಚ್ 2019, 20:00 IST
ಕ್ರೀಡೆಯಲ್ಲಿ ಗಳಿಸಿದ ಬಹುಮಾನಗಳೊಂದಿಗೆ ಶಿಕ್ಷಕ ಎಚ್.ಎಂ.ಗುಣಸಾಗರ
ಕ್ರೀಡೆಯಲ್ಲಿ ಗಳಿಸಿದ ಬಹುಮಾನಗಳೊಂದಿಗೆ ಶಿಕ್ಷಕ ಎಚ್.ಎಂ.ಗುಣಸಾಗರ   

ಹೂವಿನಹಡಗಲಿ: ತಾಲ್ಲೂಕಿನ ಸೋವೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಎಚ್.ಎಂ.ಗುಣಸಾಗರ ಅವರು ದೇಸಿ ಕ್ರೀಡೆ ಕಬಡ್ಡಿ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಏಕಕಾಲಕ್ಕೆ ಸಾಧನೆ ಮಾಡಿ, ಬಹುಮುಖ ಕ್ರೀಡಾ ಪ್ರತಿಭೆಯಾಗಿ ಹೊರ ಹೊಮ್ಮಿದ್ದಾರೆ.

ಕಬಡ್ಡಿ ಕ್ರೀಡೆಯಲ್ಲಿ ಅವರದು ವಿಶಿಷ್ಟ ಸಾಧನೆ. ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸುವ ಕ್ರೀಡಾಕೂಟದಲ್ಲಿ ಸತತ ಎಂಟು ವರ್ಷಗಳಿಂದ ಬಳ್ಳಾರಿ ಜಿಲ್ಲಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಮಿಂಚಿದ್ದಾರೆ. 2016ರಲ್ಲಿ ಅವರ ನಾಯಕತ್ವದ ಬಳ್ಳಾರಿ ಜಿಲ್ಲಾ ಕಬಡ್ಡಿ ತಂಡ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದದ್ದು ಹೆಗ್ಗಳಿಕೆ.

ಕಬಡ್ಡಿಯಲ್ಲಿ ಗುಣಸಾಗರ ಆಲ್‌ರೌಂಡ್‌ ಆಟಕ್ಕೆ ಹೆಸರುವಾಸಿ. ರೈಡರ್‌ ಆಗಿ ಅವರು ಎದುರಾಳಿಯ ಅಂಕಣಕ್ಕೆ ನುಗ್ಗಿದರೆ ಅಂಕ ಗಳಿಸದೇ ವಾಪಾಸು ಬರುವುದೇ ಇಲ್ಲ. ಕಲಾತ್ಮಕ ಆಟವನ್ನು ರೂಢಿಸಿಕೊಂಡಿರುವ ಕಾರಣಕ್ಕೆ ಪ್ರತಿ ವರ್ಷವೂ ಅವರಿಗೆ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಆಡುವ ಅವಕಾಶ ಒದಗಿ ಬರುತ್ತದೆ.

ADVERTISEMENT

ಗುಣಸಾಗರ ಅವರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಹೆಗ್ಗಡಹಳ್ಳಿಯವರು. 2008ರ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆ ಆಯ್ಕೆ ಮಾಡಿಕೊಂಡು ತಾಲ್ಲೂಕಿನ ಸೋವೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೂವಿನಹಡಗಲಿಯಲ್ಲಿ ವಾಸಿಸುತ್ತಿರುವ ಅವರು ದಿನವೂ ಕ್ರೀಡಾಭ್ಯಾಸ ನಡೆಸುತ್ತಾರೆ.

ಬಾಲ್ಯದಿಂದಲೂ ಅವರಿಗೆ ಕ್ರೀಡೆಗಳ ಬಗ್ಗೆ ವಿಶೇಷ ಆಸಕ್ತಿ. ಪ್ರಾಥಮಿಕ ಹಂತದಲ್ಲಿ ಕ್ರೀಡಾ ಸಾಧನೆ ಮಾಡಿಯೇ ಮಂಡ್ಯದ ಕ್ರೀಡಾ ವಸತಿ ಶಾಲೆಗೆ ಆಯ್ಕೆಯಾದವರು. ಅಲ್ಲಿನ ಕ್ರೀಡಾ ಪರಿಸರದಲ್ಲಿ ಪಳಗಿ ಕಬಡ್ಡಿ ಸೇರಿದಂತೆ ಫುಟ್‌ಬಾಲ್‌, ವಾಲಿಬಾಲ್‌, ಕ್ರಿಕೆಟ್‌, ಬಾಲ್‌ ಬ್ಯಾಡ್ಮಿಂಟನ್‌ ಕ್ರೀಡೆಗಳಲ್ಲಿ ಮುಂಚೂಣಿ ಆಟಗಾರರಾಗಿ ರೂಪುಗೊಂಡಿದ್ದಾರೆ. ಶಿಕ್ಷಕರಾಗಿ ನೇಮಕಗೊಂಡ ಬಳಿಕವೂ ಕಠಿಣ ಅಭ್ಯಾಸ ನಡೆಸುತ್ತಾ ಎಲ್ಲ ಕ್ರೀಡೆಗಳಲ್ಲೂ ಹಿಡಿತ ಸಾಧಿಸಿದ್ದಾರೆ.

ಅವರು ಸೇವೆ ಸಲ್ಲಿಸುವ ಸೋವೇನಹಳ್ಳಿ ಶಾಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ. ಬೋಧನೆಯ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡುತ್ತಾರೆ. ಶಾಲೆಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ ತಮಗೆ ದೊರೆತಿರುವ ಪದಕಗಳನ್ನೇ ಬಹುಮಾನವಾಗಿ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುತ್ತಿದ್ದಾರೆ.

‘ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘ ನೌಕರರ ಕ್ರೀಡಾಕೂಟಕ್ಕೆ ಉತ್ತಮ ಬೆಂಬಲ ನೀಡುತ್ತಿದೆ. ಆದ್ದರಿಂದಲೇ ನಾನು ಸತತ ಎಂಟು ಬಾರಿ ರಾಜ್ಯ ಮಟ್ಟದ ತಂಡ ಪ್ರತಿನಿಧಿಸಲು ಸಾಧ್ಯವಾಯಿತು’ ಎಂದು ಗುಣಸಾಗರ ಹೇಳಿದರು.

‘ಇಲ್ಲಿನ ಮಕ್ಕಳಿಗೆ ಕ್ರೀಡೆಗಳ ಬಗ್ಗೆ ಆಸಕ್ತಿ ಕಡಿಮೆ. ಬಲವಂತದಿಂದ ಆಟಗಳಿಗೆ ಕರೆ ತರಬೇಕಿದೆ. ಉತ್ಸಾಹದಿಂದ ಮುಂದೆ ಬಂದ ಸೋವೇನಹಳ್ಳಿಯ ನಾಲ್ಕು ವಿದ್ಯಾರ್ಥಿಗಳು ತಮ್ಮಲ್ಲಿ ತರಬೇತಿ ಪಡೆದು ಕ್ರೀಡಾ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಮಕ್ಕಳು ಆಸಕ್ತಿ ತೋರಿಸಿದರೆ ಎಲ್ಲ ರೀತಿಯ ತರಬೇತಿ ನೀಡಿ ಕ್ರೀಡೆಗಳಿಗೆ ಅಣಿಗೊಳಿಸಲು ಸಿದ್ಧನಿದ್ದೇನೆ’ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.