ADVERTISEMENT

ಸೈನಾಗೆ ಪ್ರಶಸ್ತಿ; ಸಮೀರ್ ‘ಹ್ಯಾಟ್ರಿಕ್‌’

ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌; ಪಿ.ವಿ.ಸಿಂಧುಗೆ ಎರಡನೇ ಬಾರಿ ಸೋಲು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 20:30 IST
Last Updated 16 ಫೆಬ್ರುವರಿ 2019, 20:30 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಗುವಾಹಟಿ (ಪಿಟಿಐ): ಸತತ ಎರಡನೇ ಬಾರಿಯೂ ಫೈನಲ್‌ನಲ್ಲಿ ಪಿ.ವಿ.ಸಿಂಧು ಅವರನ್ನು ಮಣಿಸಿದ ಸೈನಾ ನೆಹ್ವಾಲ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಶನಿವಾರ ನಡೆದ ಪಂದ್ಯದಲ್ಲಿ ಸೈನಾ ನೇರ ಗೇಮ್‌ಗಳಿಂದ ಎದುರಾಳಿಯನ್ನು ಮಣಿಸಿದರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಯುವ ಆಟಗಾರ ಲಕ್ಷ್ಯ ಸೇನ್ ಎದುರು ನೇರ ಗೇಮ್‌ಗಳಿಂದ ಗೆದ್ದ ಸಮೀರ್ ವರ್ಮಾ ‘ಹ್ಯಾಟ್ರಿಕ್’ ಸಾಧನೆ ಮಾಡಿದರು.

ಮೂರು ಬಾರಿ ಚಾಂಪಿಯನ್ ಆಗಿದ್ದ ಸೈನಾ ಬಲವಾದ ಸ್ಮ್ಯಾಷ್‌ಗಳ ಮೂಲಕ ಸಿಂಧು ಅವರನ್ನು ಕಂಗೆಡಿಸಿ 21–18, 21–15ರಿಂದ ಗೆದ್ದರು. ಸಿಂಧು ಈ ಹಿಂದೆ ಎರಡು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಕಳೆದ ಬಾರಿ ನಾಗಪುರದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲೂ ಸೈನಾ ಗೆದ್ದಿದ್ದರು.

ADVERTISEMENT

ಭಾರತದ ಪ್ರಮುಖ ಆಟಗಾ ರ್ತಿಯರ ಹಣಾಹಣಿಗೆ ಸಾಕ್ಷಿಯಾಗಲು ಟಿಆರ್‌ಪಿ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್‌ ಪ್ರಿಯರು ಕಿಕ್ಕಿರಿದು ತುಂಬಿದ್ದರು. ಅವರನ್ನು ಕ್ಷಣ ಕ್ಷಣವೂ ರಂಜಿಸಿದ ಸೈನಾ ಮತ್ತು ಸಿಂಧು ಪ್ರಬಲ ಪೈಪೋಟಿ ನಡೆಸಿದರು.

ಮೊದಲ ಗೇಮ್‌ನಲ್ಲಿ ಕೊನೆಯ ವರೆಗೂ ಛಲ ಬಿಡದೆ ಹೋರಾಡಿದ ಸಿಂಧು ಎರಡನೇ ಗೇಮ್‌ನಲ್ಲಿ ಆರಂಭ ದಿಂದಲೇ ಹಿನ್ನಡೆ ಅನುಭವಿಸಿದರು. ಹೀಗಾಗಿ ಸೈನಾ ಹಾದಿ ಸುಗಮವಾಯಿತು.

ಎದೆಗುಂದದ ಲಕ್ಷ್ಯ ಸೇನ್‌: ಪುರುಷರ ಸಿಂಗಲ್ಸ್‌ನಲ್ಲೂ ಭಾರಿ ಪೈಪೋಟಿ ಕಂಡುಬಂತು. 2011 ಮತ್ತು 2017ರಲ್ಲಿ ಪ್ರಶಸ್ತಿ ಗೆದ್ದ ಮಧ್ಯಪ್ರದೇಶದ ಸಮೀರ್ ವರ್ಮಾಗೆ 17 ವರ್ಷದ ಲಕ್ಷ್ಯ ಸೇನ್‌ ಭಾರಿ ಸವಾಲೊಡ್ಡಿದರು. ಏಷ್ಯಾ ಜೂನಿಯರ್‌ ಚಾಂಪಿಯನ್‌ ಲಕ್ಷ್ಯ ಅವರನ್ನು ಸಮೀರ್‌ 21–18, 21–13ರಿಂದ ಮಣಿಸಿದರು. 2017ರಲ್ಲೂ ಸಮೀರ್ ವರ್ಮಾಗೆ ಲಕ್ಷ್ಯ ಸೇನ್‌ ಮಣಿದಿದ್ದರು.

ಪ್ರಣವ್‌–ಚಿರಾಗ್‌ಗೆ ಪ್ರಸಸ್ತಿ:ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಪ್ರಣವ್ ಜೆರಿ ಛೋಪ್ರಾ ಮತ್ತು ಚಿರಾಗ್ ಶೆಟ್ಟಿ ಜೋಡಿ ಎಂ.ಆರ್‌.ಅರ್ಜುನ್ ಮತ್ತು ಶ್ಲೋಕ್ ರಾಮಚಂದ್ರನ್‌ ವಿರುದ್ಧ 21–13, 22–20ರಿಂದ ಸೋಲಿಸಿದರು. ಪ್ರಣವ್‌ 2013, 2015ರಲ್ಲಿ ಡಬಲ್ಸ್‌ ವಿಭಾಗದ, 2010ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.