ADVERTISEMENT

ರಾಷ್ಟ್ರೀಯ ಕ್ರೀಡಾಕೂಟದ ಬ್ಯಾಡ್ಮಿಂಟನ್: ಸತೀಶ್‌ ಕುಮಾರ್‌ಗೆ ಚಿನ್ನ ‘ಡಬಲ್‘

ಪಿಟಿಐ
Published 4 ಫೆಬ್ರುವರಿ 2025, 19:12 IST
Last Updated 4 ಫೆಬ್ರುವರಿ 2025, 19:12 IST
   

ಡೆಹ್ರಾಡೂನ್: ತಮಿಳುನಾಡಿನ ಸತೀಶ್ ಕುಮಾರ್ ಕರುಣಾಕರನ್ ಅವರು ರಾಷ್ಟ್ರೀಯ ಕ್ರೀಡಾಕೂಟದ ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಎರಡು ಚಿನ್ನದ ಪದಕ ಜಯಿಸಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ  ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ಮೋಲ್ ಖರ್ಬ್ ಬಂಗಾರ ಪದಕಕ್ಕೆ ಕೊರಳೊಡ್ಡಿದರು.

ಇಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಬ್ಯಾಡ್ಮಿಂಟನ್ ಕ್ರೀಡೆಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಹರಿಯಾಣದ 18 ವರ್ಷದ ಅನ್ಮೋಲ್ ಅವರು ಫೈನಲ್‌ನಲ್ಲಿ 21-16, 22-20ರಿಂದ  ಅನುಪಮಾ ಉಪಾಧ್ಯಾಯ ವಿರುದ್ಧ ಜಯಿಸಿದರು. 

ಅನ್ಮೋಲ್ ಅವರು ಈಚೆಗೆ ಏಷ್ಯಾ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರೀಯ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವುದು ಅವರ ವೃತ್ತಿಜೀವನದಲ್ಲಿ ಮತ್ತೊಂದು ಪ್ರಮುಖ ಸಾಧನೆಯಾಗಿದೆ. ಈಚೆಗೆ ಗುವಾಹಟಿ ಮಾಸ್ಟರ್ಸ್‌ನಲ್ಲಿ ಅವರು ರನ್ನರ್ಸ್ ಅಪ್ ಆಗಿದ್ದರು. ಹೋದ ವರ್ಷ ಬೆಲ್ಜಿಯನ್ ಮತ್ತು ಪೋಲೆಂಡ್ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅವರು ಗೆದ್ದಿದ್ದರು. 

ADVERTISEMENT

ರಾಷ್ಟ್ರೀಯ ಕೂಟದ  ಮಿಶ್ರ ಡಬಲ್ಸ್ ಬ್ಯಾಡ್ಮಿಂಟನ್ ವಿಭಾಗದ ಫೈನಲ್‌ನಲ್ಲಿ  ಸತೀಶಕುಮಾರ್ ಕರುಣಾಕರನ್ –ಆದ್ಯಾ ವಾರಿಯತ್ ಜೋಡಿಯು 21-11, 20-22, 21-8 ರಿಂದ ದೀಪ್ ರಾಮಭಿಯಾ ಮತ್ತು ಅಕ್ಷಯಾ ವಾರಂಗ್  ಅವರನ್ನು ಸೋಲಿಸಿ ಚಿನ್ನ ಗಳಿಸಿತು. 

ಪುರುಷರ ಡಬಲ್ಸ್‌ನಲ್ಲಿ ಎಚ್‌.ವಿ. ನಿತಿನ್ ಮತ್ತು ಪ್ರಕಾಶ್ ರಾಜ್ 21-16, 21-14 ರಿಂದ ವೈಭವ್ ಮತ್ತು ಆಶಿತ್ ಸೂರ್ಯ ಜೋಡಿಯನ್ನು ಮಣಿಸಿ, ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. 

ಆತಿಥೇಯ ರಾಜ್ಯದ ಆಟಗಾರ ಮತ್ತು ಒಲಿಂಪಿಯನ್ ಲಕ್ಷ್ಯ ಸೇನ್ ಅವರು ಸೋಮವಾರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.