ADVERTISEMENT

ರಾಷ್ಟ್ರೀಯ ಕ್ರೀಡೆಗಳಿಗೆ ತೆರೆ: ಶ್ರೀಹರಿ ನಟರಾಜ್ ಶ್ರೇಷ್ಠ ಅಥ್ಲೀಟ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
<div class="paragraphs"><p>ಶ್ರೇಷ್ಠ ಅಥ್ಲೀಟ್‌ ಗೌರವಕ್ಕೆ ಭಾಜನರಾದ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್</p></div>

ಶ್ರೇಷ್ಠ ಅಥ್ಲೀಟ್‌ ಗೌರವಕ್ಕೆ ಭಾಜನರಾದ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್

   

ಪಣಜಿ: ಮಹಾರಾಷ್ಟ್ರ ತಂಡ, ಗುರುವಾರ ಮುಕ್ತಾಯಗೊಂಡ 37ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಗೆದ್ದುಕೊಂಡು ರಾಜಾ ಭಲೀಂದ್ರ ಸಿಂಗ್ ರೋಲಿಂಗ್‌ ಟ್ರೋಫಿ ತನ್ನದಾಗಿಸಿಕೊಂಡಿತು. 1994ರ ನಂತರ ಮೊದಲ ಬಾರಿ ಮಹಾರಾಷ್ಟ್ರ ಈ ಟ್ರೋಫಿ ಗೆದ್ದುಕೊಂಡಿದೆ.

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಂಡಕ್ಕೆ ಟ್ರೊಫಿ ಪ್ರಧಾನ ಮಾಡಿದರು. ಅಂತರರಾಷ್ಟ್ರೀಯ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ ಎಂಟು ಚಿನ್ನ ಸೇರಿದಂತೆ ಹತ್ತು ಪದಕಗಳನ್ನು ಗೆದ್ದುಕೊಂಡು ಶ್ರೇಷ್ಠ ಅಥ್ಲೀಟ್‌ ಗೌರವಕ್ಕೆ ಭಾಜನರಾದರು. ಅವರು ಭಾರತ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಅವರಿಂದ ಟ್ರೋಫಿ ಸ್ವೀಕರಿಸಿದರು.

ADVERTISEMENT

ಮಹಾರಾಷ್ಟ್ರದ ರಿದಮಿಕ್‌ ಜಿಮ್ನಾಸ್ಟ್‌ ಸಂಯುಕ್ತಾ ಪ್ರಸೇನ್ ಕಾಳೆ ಮತ್ತು ಒಡಿಶಾದ ಪ್ರಣತಿ ನಾಯಕ್ ಅವರು ಶ್ರೇಷ್ಠ ಮಹಿಳಾ ಅಥ್ಲೀಟ್‌ ಟ್ರೋಫಿ ಹಂಚಿಕೊಂಡರು. ಇಬ್ಬರೂ ಜಿಮ್ನಾಸ್ಟಿಕ್ಸ್‌ನಲ್ಲಿ ತಲಾ ನಾಲ್ಕು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದುಕೊಂಡರು.

ಮಹಾರಾಷ್ಟ್ರ ತಂಡ 228 ಪದಕಗಳೊಂದಿಗೆ (80 ಚಿನ್ನ, 69 ಬೆಳ್ಳಿ, 79 ಕಂಚು) ವಿಜೃಂಭಿಸಿತು. 2007 ರಿಂದ ಕಳೆದ ವರ್ಷದವರೆಗೆ ಸರ್ವಿಸಸ್‌ ಅಗ್ರಸ್ಥಾನ ಗೆಲ್ಲುತ್ತಾ ಬಂದಿತ್ತು. ಈ ಬಾರಿ ಆ ತಂಡ ಎರಡನೇ ಸ್ಥಾನ (66 ಚಿನ್ನ, 27 ಬೆಳ್ಳಿ, 33 ಕಂಚು) ಪಡೆಯಿತು. ಆತಿಥೇಯ ಗೋವಾ 9ನೇ ಸ್ಥಾನ ಗಳಿಸಿ (27 ಚಿನ್ನ ಸೇರಿ 92 ಪದಕ) ತನ್ನ ಇದುವರೆಗಿನ ಶ್ರೇಷ್ಠ ಪ್ರದರ್ಶನ ನೀಡಿತು.

ಗಾಲ್ಫ್‌ನಲ್ಲಿ ಕರ್ನಾಟಕದ ಯಶಸ್‌ ರಾಮಚಂದ್ರ ಚಿನ್ನದ ಪದಕ ಪಡೆದರು. ಮಹಿಳೆಯರ ಟೀಮ್ ವಿಭಾಗದಲ್ಲಿ ವಿಧಾತ್ರಿ ಅರಸ್‌– ಸಾನ್ವಿ ಸೋಮು ಅವರು ಕಂಚಿನ ಪದಕ ಪಡೆದರು.

ಮುಂದಿನ, 38ನೇ ರಾಷ್ಟ್ರೀಯ ಕ್ರೀಡೆಗಳು ಉತ್ತರಾಖಂಡದಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.