ADVERTISEMENT

ಭವಿಷ್ಯದ ಟೂರ್ನಿಗಳತ್ತ ಚಿತ್ತ: ಕೋಚ್‌ ಗ್ರಹಾಂ ರೀಡ್‌

ಬೆಂಗಳೂರಿನಲ್ಲಿ ಇಂದಿನಿಂದ ಪುರುಷರ ರಾಷ್ಟ್ರೀಯ ಹಾಕಿ ಶಿಬಿರ

ಪಿಟಿಐ
Published 5 ಅಕ್ಟೋಬರ್ 2021, 12:59 IST
Last Updated 5 ಅಕ್ಟೋಬರ್ 2021, 12:59 IST
ಭಾರತ ಹಾಕಿ ತಂಡದ ಕೋಚ್ ಗ್ರಹಾಂ ರೀಡ್‌ (ಬಲ) ಮತ್ತು ನಾಯಕ ಮನ್‌ಪ್ರೀತ್ ಸಿಂಗ್
ಭಾರತ ಹಾಕಿ ತಂಡದ ಕೋಚ್ ಗ್ರಹಾಂ ರೀಡ್‌ (ಬಲ) ಮತ್ತು ನಾಯಕ ಮನ್‌ಪ್ರೀತ್ ಸಿಂಗ್   

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಐತಿಹಾಸಿಕ ಕಂಚಿನ ಪದಕ ಜಯಿಸಿದ ಬಳಿಕ ನಡೆಯುತ್ತಿರುವ ರಾಷ್ಟ್ರೀಯ ಶಿಬಿರದಲ್ಲಿ ಮುಂಬರುವ ಟೂರ್ನಿಗಳಿಗೆ ಸಜ್ಜುಗೊಳ್ಳುವ ಆದ್ಯತೆ ಇರಲಿದೆ ಎಂದು ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರ ಗ್ರಹಾಂ ರೀಡ್ ಹೇಳಿದ್ದಾರೆ.

ಕೋವಿಡ್‌ನಿಂದಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದರೂ ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರವು (ಸಾಯ್‌) ಆಟಗಾರರಿಗೆ ನೀಡಿದ ನೆರವಿನ ಕುರಿತು ಅವರು ಸಂತಸ ವ್ಯಕ್ತಪಡಿಸಿದರು.

‘ಹುಡುಗರೆಲ್ಲರೂ ತರಬೇತಿಯನ್ನು ಪುನರಾರಂಭಕ್ಕೆ ಉತ್ಸುಕರಾಗಿದ್ದಾರೆ. ಮುಂಬರುವ ಟೂರ್ನಿಗಳನ್ನು ಎದುರು ನೋಡುತ್ತಿದ್ದೇವೆ‘ ಎಂದು ರೀಡ್ ಹೇಳಿದರು.

ADVERTISEMENT

ಇಲ್ಲಿಯ ಸಾಯ್ ಕೇಂದ್ರದಲ್ಲಿ ಸೋಮವಾರದಿಂದ ತರಬೇತಿ ಶಿಬಿರ ಆರಂಭವಾಗಿದೆ.

ಕೋವಿಡ್‌ ಸಂಬಂಧಿತ ಎಲ್ಲ ನಿಯಮಾವಳಿಗಳನ್ನು ಶಿಬಿರದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ರ‍್ಯಾಪಿಡ್‌ ಆ್ಯಂಟಿಜೆನ್ ಪರೀಕ್ಷೆಗೆ (ಆರ್‌ಎಟಿ) ಒಳಗಾಗಿದ್ದಾರೆ. ಮತ್ತು ಕ್ಯಾರೆಂಟೈನ್ ನಿಯಮದ ಪ್ರಕಾರ ಪ್ರತ್ಯೇಕ ಕೊಠಡಿಗಳಲ್ಲಿ ತಂಗಿದ್ದಾರೆ ಎಂದು ಸಾಯ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಆಟಗಾರರು ಹೊರಾಂಗಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಸಾಯ್‌ನಲ್ಲಿ ತರಬೇತಿ ಪಡೆಯುತ್ತಿರುವ ಇತರ ಶಿಬಿರಾರ್ಥಿಗಳೊಂದಿಗೆ ಅವರು ಬೆರೆಯುತ್ತಿಲ್ಲ‘ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ತಂಡವು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದಾದ ಬಳಿಕ ಮುಂದಿನ ವರ್ಷ ಜುಲೈ-ಆಗಸ್ಟ್‌ನಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಮತ್ತು 2022ರ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ಏಷ್ಯನ್ ಗೇಮ್ಸ್ ನಡೆಯಲಿವೆ.

ಭಾರತದಲ್ಲಿ 2023ರಲ್ಲಿ ಎಫ್‌ಐಎಚ್‌ ವಿಶ್ವಕಪ್ ಕೂಡ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.